ADVERTISEMENT

ಫುಟ್‌ಬಾಲ್ ರೋಚಕತೆ ಮೀರಿದ ಸಾಹಸಗಾಥೆ

ಏಜೆನ್ಸೀಸ್
Published 11 ಜುಲೈ 2018, 18:00 IST
Last Updated 11 ಜುಲೈ 2018, 18:00 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕರು   

ಮಾ ಸೈ (ಥಾಯ್ಲೆಂಡ್):ಥಾಯ್ ಲುವಾಂಗ್ ಗುಹೆಯಲ್ಲಿ 2 ವಾರ ಕಳೆದ ಫುಟ್‌ಬಾಲ್ ತಂಡದ ಬಾಲಕರ ದೇಹದ ತೂಕದಲ್ಲಿ ಸರಾಸರಿ 2 ಕೆ.ಜಿ. ಕಡಿಮೆಯಾಗಿದೆ. ಶ್ವಾಸಕೋಶದ ಸೋಂಕು ಬಿಟ್ಟರೆ ಬೇರೇನೂ ತೊಂದರೆಯಿಲ್ಲ ಎಂದು ಆರೋಗ್ಯಾಧಿಕಾರಿ ಥೊಂಗ್‌ಚಾಯ್ ಹೇಳಿದ್ದಾರೆ.

ತರಬೇತುದಾರ ಹಾಗೂ 12 ಬಾಲಕರು ಗುಹೆಯಲ್ಲಿ ಹನಿಯುತ್ತಿದ್ದ ನೀರು ಕುಡಿದು, ಹುಟ್ಟುಹಬ್ಬಕ್ಕೆ ತಂದಿದ್ದ ಕುರುಕಲು ತಿಂಡಿ ತಿಂದು ಜೀವ ಉಳಿಸಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ನಾಲ್ವರು ನಿರಾಶ್ರಿತರು

ADVERTISEMENT

ಗುಹೆಯಿಂದ ರಕ್ಷಿಸಿದವರ ಪೈಕಿ ಕನಿಷ್ಠ ಮೂರು ಮಕ್ಕಳು ಹಾಗೂ ತರಬೇತುದಾರ ಎಕ್ಕಾಪೊಲ್ ಚಂಟಾವಾಂಗ್ ನಿರಾಶ್ರಿತರು.

ಹ್ಯಾರಿ ಮನೆಯಲ್ಲಿ ಶೋಕ

ಗುಹೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ಆಸ್ಟ್ರೇಲಿಯಾದ ವೈದ್ಯ ರಿಚರ್ಡ್ ಹ್ಯಾರಿ ಅವರ ತಂದೆ ನಿಧನದ ಸುದ್ದಿ ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ಬಂದು ಸಂಭ್ರಮವನ್ನು ಮಸುಕಾಗಿಸಿತು.

ಗುಹೆಯಲ್ಲಿ 63 ಗಂಟೆ!

ಮುಳುಗುತಜ್ಞ ಎರಿಕ್ ಬ್ರೌನ್ ಅವರು ನೀರು ತುಂಬಿದ್ದ ಗುಹೆಯಲ್ಲಿ 63 ಗಂಟೆ ಕಳೆದಿರುವುದಾಗಿ ಹೇಳಿಕೊಂಡಿದ್ದಾರೆ. ಭಾನುವಾರ ಆರಂಭವಾದ ಕಾರ್ಯಾಚರಣೆ ಮೂರು ದಿನ ಹಿಡಿದಿತ್ತು.

ಇಡೀ ಕಾರ್ಯಾಚರಣೆಯನ್ನು ಅವರು ಪರ್ವತಾರೋಹಣಕ್ಕೆ ಹೋಲಿಸಿದ್ದಾರೆ.‘ಕಿರುದಾರಿಗಳು, ಕತ್ತಲು ಹಾಗೂ ನಿರಂತರವಾಗಿ ಪ್ರವಾಹದ ಹೊಡೆತ ಮಕ್ಕಳನ್ನು ರಕ್ಷಿಸಲು ಸವಾಲಾಗಿತ್ತು’ ಎಂದು ಮುಳುಗುತಜ್ಞರು ಹೇಳಿದ್ದಾರೆ.

‘ಪ್ರತಿ ಬಾಲಕನ ರಕ್ಷಣೆಯನ್ನು ಇಬ್ಬರು ಮುಳುಗುತಜ್ಞರು ನಿರ್ವಹಿಸುತ್ತಿದ್ದರು. ಬಾಲಕರಿಗೆ ಮತ್ತು ಬರಿಸುವ ಔಷಧ ನೀಡಿ ಹೊರ ತರಲಾಯಿತು. ಒಬ್ಬನ ರಕ್ಷಣೆಗೆ 9ರಿಂದ 11 ಗಂಟೆ ಹಿಡಿಯಿತು’ ಎಂದು ಅವರು ವಿವರಿಸಿದ್ದಾರೆ.

ಸಿನಿಮಾಗೆ ಕತೆ ಸಿಕ್ಕಿತು!

ಜಗತ್ತಿನ ಕುತೂಹಲ ಕೆರಳಿಸಿದ್ದ ಬಾಲಕರ ರಕ್ಷಣಾ ಕಾರ್ಯಾಚರಣೆಯು ಹಾಲಿವುಡ್ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ‘ಗಾಡ್ಸ್ ನಾಟ್ ಡೆಡ್’ ಸಿನಿಮಾ ಹೊರತಂದಿದ್ದ ಫ್ಲಿಕ್ಸ್ ಎಂಟರ್ಟೈನ್‌ಮೆಂಟ್ ಸಂಸ್ಥೆಯು ಈ ಘಟನೆಯನ್ನು ಸಿನಿಮಾ ಮಾಡಲು ಮುಂದಾಗಿದೆ. ಕಯೋಸ್ ಎಂಟರ್‌ಟೈನ್‌ಮೆಂಟ್ ಈ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಲಿದೆ.

ಚಿಲಿಯಲ್ಲಿ 69 ದಿನಗಳಿಂದ ಸಿಲುಕಿಕೊಂಡಿದ್ದ 33 ಮಕ್ಕಳನ್ನು ಕುರಿತು 2015ರಲ್ಲಿ ‘ದಿ 33’ ಎಂಬ ಹೆಸರಿನಲ್ಲಿ ಸಿನಿಮಾ ಬಂದಿತ್ತು.

ಚಿಲಿ ಘಟನೆಯನ್ನು ನೆನಪಿಸಿಕೊಂಡಿರುವ ಸಿನಿಮಾ ನಿರ್ದೇಶಕ ಮೈಕ್ ಮೆಡವೊಯ್, ‘ಪ್ರತಿಕೂಲ ಪರಿಸ್ಥಿತಿಯಲ್ಲಿ ಥಾಯ್ ಮಕ್ಕಳ ಧೈರ್ಯ ಅಪೂರ್ವವಾದದ್ದು’ ಎಂದಿದ್ದಾರೆ.

ಗೆಲುವನ್ನು ಅರ್ಪಿಸಿದ ಫ್ರಾನ್ಸ್

ಮಂಗಳವಾರ ವಿಶ್ವಕಪ್ ಫುಟ್‌ಬಾಲ್ ಪಂದ್ಯದಲ್ಲಿಬೆಲ್ಜಿಯಂ ವಿರುದ್ಧದ ತನ್ನ ಗೆಲುವನ್ನು ಮಕ್ಕಳಿಗೆ ಫ್ರಾನ್ಸ್ ಅರ್ಪಿಸಿದೆ. ಫ್ರಾನ್ಸ್ ತಂಡದ ಆಟಗಾರ ಪೌಲ್ ಪೊಗ್ಬಾ ಅವರು ‘ನೀವು ಈ ದಿನದ ಹೀರೋಗಳು. ನೀವು ತುಂಬಾ ಧೈರ್ಯವಂತರು.ನಿಮಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

ರಿಕ್ ಸ್ಟ್ಯಾನ್‌ಸನ್

ಲುವಾಂಗ್ ಗುಹೆಯಲ್ಲಿದ್ದ ಮಕ್ಕಳನ್ನು ಮೊದಲಿಗೆ ಪತ್ತೆ ಹಚ್ಚಿದ್ದು ಬ್ರಿಟಿಷ್ ಮುಳುಗುತಜ್ಞ ರಿಕ್ ಸ್ಟ್ಯಾನ್‌ಸನ್. 10 ದಿನಗಳ ಶೋಧದ ಬಳಿಕ ಸದಸ್ಯರನ್ನು ಪತ್ತೆ ಹಚ್ಚುವಲ್ಲಿ ಇವರು ಯಶಸ್ವಿಯಾಗಿದ್ದರು.

ಬೌದ್ಧ ಸನ್ಯಾಸಿ ಕೋಚ್ ಆದ ಕತೆ

ವೈಲ್ಡ್ ಬೋರ್ಸ್ ತಂಡದ ತರಬೇತುದಾರ ಎಕ್ಕಾಪೊಲ್ ಚಂಟಾವಾಂಗ್ (25) ಅವರ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 12 ಬಾಲಕರಲ್ಲಿ ಧೈರ್ಯ ತುಂಬುತ್ತಾ ಕತ್ತಲ ಗುಹೆಯಲ್ಲಿ 18 ದಿನಗಳನ್ನು ಕಳೆದ ಅವರು ಮಾ ಸೈ ಸಮುದಾಯದ ಭರವಸೆಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ತಮ್ಮ ಆರಂಭದ ದಿನಗಳಲ್ಲಿ ಎಕ್ಕಾಪೊಲ್ ಬೌದ್ಧ ಸನ್ಯಾಸಿಯಾಗಿದ್ದರು. ಬಳಿಕ ವೈಲ್ಡ್ ಬೋರ್ಸ್‌ ತಂಡದ ತರಬೇತುದಾರರಾದರು. ಧ್ಯಾನ, ಚಾರಣ, ಪ್ರವಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆಗಾಗ್ಗೆ ಅರಣ್ಯಕ್ಕೆ ಚಾರಣಕ್ಕೆ ತೆರಳುತ್ತಿದ್ದ ಅವರು ಜೊತೆಗೆ ಮೆಣಸಿನಕಾಯಿ ಚಟ್ನಿ ಹಾಗೂ ಅಕ್ಕಿಯನ್ನು ಒಯ್ಯುತ್ತಿದ್ದರು. ಮಕ್ಕಳಿಗೆ ಚೆನ್ನಾಗಿ ಕಲಿಸುತ್ತಿದ್ದರು ಎಂದು ಫುಟ್‌ಬಾಲ್ ತಂಡದ ಸ್ಥಾಪಕ ನೊಪ್ಪಾರಟ್ ಸ್ಮರಿಸಿದರು.

ಬಾಲಕರಿಗೆ ವಿವಿಧ ಆಫರ್..

ಇಂಗ್ಲೆಂಡ್ ತಂಡದ ಕೈಲ್ ವಾಕರ್ ಹಾಗೂ ಗೋಲ್‌ಕೀಪರ್ ಜಾಕ್ ಬಟ್ಲಾಂಡ್ ಅವರು ಮಕ್ಕಳಿಗೆ ಇಂಗ್ಲೆಂಡ್ ಫುಟ್‌ಬಾಲ್ ತಂಡದ ಜರ್ಸಿ ಹಾಗೂ ಕಿಟ್ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಫುಟ್‌ಬಾಲ್ ಫೈನಲ್ ಪಂದ್ಯದಲ್ಲಿ ಭಾಗಿಯಾಗುವಂತೆ ಈ ಮೊದಲೇ ಆಫರ್ ನೀಡಲಾಗಿತ್ತು ಆದರೆ ಆರೋಗ್ಯದ ದೃಷ್ಟಿಯಿಂದ ಮಕ್ಕಳು ಭಾಗಿಯಾಗುತ್ತಿಲ್ಲ. ಮತ್ತೊಂದು ಸಮಾರಂಭದಲ್ಲಿ ಅವರನ್ನು ಆಹ್ವಾನಿಸುತ್ತೇವೆ ಎಂದು ಫಿಫಾ ಹೇಳಿದೆ.

ಅಂತರರಾಷ್ಟ್ರೀಯ ಟೂರ್ನಿಗೆ ಅಹ್ವಾನಿಸುವುದಾಗಿಬಾರ್ಸಿಲೋನಾ ಕ್ಲಬ್‌ ಹೇಳಿದೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಕೂಡಾ ಮಕ್ಕಳನ್ನು ಆಹ್ವಾನಿಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.