ADVERTISEMENT

ಥಾಯ್ಲೆಂಡ್‌–ಕಾಂಬೋಡಿಯಾ ಕದನ ವಿರಾಮ ಮಾತುಕತೆಗೆ ಒಪ್ಪಿಕೊಂಡಿವೆ: ಡೊನಾಲ್ಡ್ ಟ್ರಂಪ್

ರಾಯಿಟರ್ಸ್
Published 27 ಜುಲೈ 2025, 2:45 IST
Last Updated 27 ಜುಲೈ 2025, 2:45 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್

ವಾಷಿಂಗ್ಟನ್: ಥಾಯ್ಲೆಂಡ್‌ ಮತ್ತು ಕಾಂಬೋಡಿಯಾದ ನಾಯಕರು ತಕ್ಷಣವೇ ಕದನ ವಿರಾಮ ಕುರಿತು ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ADVERTISEMENT

‘ಕದನ ವಿರಾಮ ಕುರಿತು ಕಾಂಬೋಡಿಯಾ ಪ್ರಧಾನಿ ಹುನ್ ಮಾನೆಟ್ ಮತ್ತು ಥಾಯ್ಲೆಂಡ್‌ನ ಹಂಗಾಮಿ ಪ್ರಧಾನಿ ಫುಮ್ಥಮ್ ವೆಚಾಯಾಚೈ ಅವರೊಂದಿಗೆ ಮಾತನಾಡಿದ್ದೇನೆ. ಒಂದು ವೇಳೆ ನನ್ನ ಮಧ್ಯಸ್ಥಿಕೆಯನ್ನು ನಿರಾಕರಿಸಿ ಗಡಿ ಸಂಘರ್ಷ ಮುಂದುವರಿಸಿದರೆ ವ್ಯಾಪಾರ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ’ ಎಂದು ಟ್ರಂಪ್ ತಿಳಿಸಿದ್ದಾರೆ.

‘ತಾತ್ವಿಕವಾಗಿ ಕದನ ವಿರಾಮ ಜಾರಿಗೆ ತರಲು ನಾವು ಒಪ್ಪಿಕೊಂಡಿದ್ದೇವೆ.ಆದರೆ, ಕಾಂಬೋಡಿಯಾ ಕಡೆಯಿಂದಲೂ ಪ್ರಾಮಾಣಿಕ ಪ್ರಯತ್ನವನ್ನು ಎದುರು ನೋಡುತ್ತಿದ್ದೇವೆ. ಕದನ ವಿರಾಮ ಜಾರಿಗೆ ಕಾರಣರಾದ ಡೊನಾಲ್ಡ್‌ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ’ ಎಂದು ಥಾಯ್ಲೆಂಡ್‌ನ ಹಂಗಾಮಿ ಪ್ರಧಾನಿ ಫುಮ್ಥಮ್ ವೆಚಾಯಾಚೈ ಹೇಳಿದ್ದಾರೆ.

ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಎರಡು ದೇಶಗಳ ನಡುವಿನ ಕ್ಷಿಪಣಿ ದಾಳಿಯಲ್ಲಿ 33 ಜನರು ಮೃತಪಟ್ಟಿದ್ದಾರೆ. 1.68 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಎರಡೂ ದೇಶಗಳು ತಕ್ಷಣವೇ ಕದನ ವಿರಾಮ ಘೋಷಿಸುವಂತೆ, ಇದಕ್ಕಾಗಿ ಮಧ್ಯಪ್ರವೇಶ ಮಾಡುವಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಕ್ಕೆ (ಆಸಿಯಾನ್‌) ವಿಶ್ವಸಂಸ್ಥೆ ಕರೆ ನೀಡಿದೆ.

ಕಾಂಬೋಡಿಯಾದೊಂದಿಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನು ಥಾಯ್ಲೆಂಡ್‌ ಶನಿವಾರ ಮುಚ್ಚಿದೆ. ಥಾಯ್ಲೆಂಡ್‌ ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಕಾಂಬೋಡಿಯಾ ಹೇಳಿದೆ. ಕಾಂಬೋಡಿಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿದೆ. ಎರಡೂ ದೇಶಗಳು ದಾಳಿ ಮುಂದುವರಿಸಿರುವುದಾಗಿ ಹೇಳಿಕೊಂಡಿದ್ದು, ತಮ್ಮ ರಾಯಭಾರ ಅಧಿಕಾರಿಗಳನ್ನು ವಾಪಸ್‌ ಕರೆಯಿಸಿಕೊಂಡಿವೆ.

ಗಡಿಭಾಗದಿಂದ 10,865 ಕುಟುಂಬಗಳ 37,635 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾಂಬೋಡಿಯಾದ ಮಾಹಿತಿ ಸಚಿವ ನೇತ್‌ ಪೆಕ್ಟ್ರಾ ಹೇಳಿದ್ದಾರೆ. ಗಡಿ ಭಾಗದ ಗ್ರಾಮಗಳಲ್ಲಿ 1.31 ಲಕ್ಷದಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂದು ಥಾಯ್ಲೆಂಡ್‌ ಹೇಳಿದೆ. ಸುರಕ್ಷತಾ ದೃಷ್ಟಿಯಿಂದ ಥಾಯ್ಲೆಂಡ್‌ ಸರ್ಕಾರ ಶನಿವಾರ ಗಡಿ ಭಾಗದ 852 ಶಾಲೆಗಳನ್ನು ಮತ್ತು ಏಳು ಆಸ್ಪತ್ರೆಗಳನ್ನು ಮುಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.