ADVERTISEMENT

ಭಾರತದಲ್ಲಿ ಜಗತ್ತಿನಲ್ಲೇ ಅಧಿಕ ತೆರಿಗೆ ದರ: ಡೊನಾಲ್ಡ್‌ ಟ್ರಂಪ್‌

ಪಿಟಿಐ
Published 19 ಫೆಬ್ರುವರಿ 2025, 6:02 IST
Last Updated 19 ಫೆಬ್ರುವರಿ 2025, 6:02 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ರಾಯಿಟರ್ಸ್‌ ಚಿತ್ರ

ನ್ಯೂಯಾರ್ಕ್‌/ಫ್ಲಾರಿಡಾ: ‘ಭಾರತವು ಜಗತ್ತಿನಲ್ಲಿಯೇ ಅತ್ಯಧಿಕ ತೆರಿಗೆ ದರ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ADVERTISEMENT

‘ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶಕ್ಕಾಗಿ ಭಾರತಕ್ಕೆ ₹ 182 ಕೋಟಿ (21 ಮಿಲಿಯನ್‌ ಡಾಲರ್) ಆರ್ಥಿಕ ನೆರವು ಒದಗಿಸುವ ಅಗತ್ಯವೇನಿದೆ?’ ಎಂದು ಟ್ರಂಪ್‌ ಅವರು ಪ್ರಶ್ನಿಸಿದ್ದಾರೆ.

‘ಮತದಾನ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗಕ್ಕೆ 21 ಮಿಲಿಯನ್‌ ಡಾಲರ್ ಕೊಡುಗೆ ನೀಡಲಾಗಿದೆ’ ಎಂಬ ಎಲಾನ್‌ ಮಸ್ಕ್ ನೇತೃತ್ವದ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಹೇಳಿಕೆ ಹಿನ್ನಲೆಯಲ್ಲಿ ಈ ಮಾತು ಹೇಳಿದ್ದಾರೆ.

ಮಂಗಳವಾರ ಈ ಕುರಿತ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಟ್ರಂಪ್‌ ಅವರು, ‘ಭಾರತದ ತೆರಿಗೆ ದರ ಪ್ರಮಾಣವು ಹೆಚ್ಚಾಗಿರುವ ಕಾರಣದಿಂದಲೇ ಅಲ್ಲಿಗೆ ನಾವು ಪ್ರವೇಶಿಸುವುದೂ ಕಷ್ಟವಾಗಿದೆ‘ ಎಂದು ಟ್ರಂಪ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಅಮೆರಿಕದ ತೆರಿಗೆದಾರರ ಹಣ ವ್ಯಯ ಮಾಡಲಾದ ಪಟ್ಟಿಯನ್ನು ಡಿಒಜಿಇ ಫೆ.16ರಂದು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದಲ್ಲಿ ಮತ ಪ್ರಮಾಣ ಹೆಚ್ಚಿಸಲು ನೆರವು ನೀಡಿರುವ ಉಲ್ಲೇಖವೂ ಇತ್ತು.

ಬಾಂಗ್ಲಾದೇಶದಲ್ಲಿ ರಾಜಕೀಯ ರೂಪುರೇಷೆ ಬಲಪಡಿಸಲು 29 ಮಿಲಿಯನ್ ಡಾಲರ್ ನೆರವು, ನೇಪಾಳದಲ್ಲಿ ಜೀವವೈವಿಧ್ಯ ಪರಿವರ್ತನೆಗೆ 19 ಮಿಲಿಯನ್ ಡಾಲರ್ ನೆರವು ನೀಡಿರುವ ಉಲ್ಲೇಖವೂ ಉದ್ದೇಶಿತ ಪಟ್ಟಿಯಲ್ಲಿತ್ತು.

ಒಕ್ಕೂಟ ಸರ್ಕಾರವು ತೆರಿಗೆದಾರರ ಹಣ ವ್ಯಯಿಸುವ ಕುರಿತು ಪಾರದರ್ಶಕತೆ ಅಗತ್ಯ ಎಂಬ ಒಪ್ಪಂದಕ್ಕೂ ಅವರು ಸಹಿ ಹಾಕಿದರು.

‘ಭಾರತ ದೇಶದ ಕುರಿತು ನನಗೆ ಅಗಾಧ ಗೌರವವಿದೆ. ಪ್ರಧಾನಮಂತ್ರಿ ಅವರ ಬಗ್ಗೆಯೂ ಗೌರವವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್‌, ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರಮೋದಿ ಅವರು ಅಮೆರಿಕಕ್ಕೂ ಭೇಟಿ ನೀಡಿದ್ದರು ಎಂದರು.

ಸರ್ಕಾರದ ವಿವಿಧ ಹಂತದಲ್ಲಿ ಸಿಬ್ಬಂದಿ ಗಾತ್ರ ತಗ್ಗಿಸುವುದು ಮಸ್ಕ್‌ ನೇತೃತ್ವದ ಡಿಒಜಿಇ ಹೊಣೆಯಾಗಿದೆ. ಇದರ ಭಾಗವಾಗಿ ಅವರು, ಜಾಗತಿಕವಾಗಿ ವಿವಿಧ ಬಾಬ್ತಿನಲ್ಲಿ ನೀಡಲಾಗುತ್ತಿದ್ದ ಮಾನವೀಯ ನೆರವು ಮೊತ್ತವನ್ನು ಸ್ಥಗಿತಗೊಳಿಸುವ ನಿಲುವು ಪ್ರಕಟಿಸಿದ್ದರು.

ಅಮೆರಿಕದ ನೆರವು (ಯುಎಸ್‌ಎಐಡಿ) ಸಂಬಂಧಿತ ಅಧಿಕಾರಿಗಳು ಫೆ. 7ರಂದು ವಿಶ್ವದಾದ್ಯಂತ ನೀಡುತ್ತಿರುವ ವಿವಿಧ ಮಾನವೀಯ ನೆರವು ಸ್ಥಗಿತಗೊಳಿಸುವ ನಿಲುವು ಪ್ರಕಟಿಸಿದ್ದರು. 

ಮತ ಪ್ರಮಾಣ ಹೆಚ್ಚಿಸಲು ಭಾರತಕ್ಕೆ ನಾವು ಏಕೆ ಹಣ ನೀಡುತ್ತಿದ್ದೇವೆ? ಅವರ ಬಳಿಯೇ ಸಾಕಷ್ಟು ಹಣವಿದೆ. ಭಾರತ ಅತಿ ಹೆಚ್ಚಿನ ತೆರಿಗೆ ದರ ಇರುವ ದೇಶ
–ಡೊನಾಲ್ಡ್‌ ಟ್ರಂಪ್, ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.