ರಾಚಿಲ್ ಕೌರ್
ಬೆಂಗಳೂರು: ಇಂದಿನ ದಿನಮಾನಗಳಲ್ಲಿ ಮಹಿಳೆಯರು ಉದ್ಯೋಗ ಹಾಗೂ ಕುಟುಂಬ ಎರಡನ್ನೂ ನಿಭಾಯಿಸುವಲ್ಲಿ ಹೆಣಗಾಡುವುದನ್ನು ನೋಡುತ್ತಿರುತ್ತೇವೆ. ಸ್ವಲ್ಪ ದೂರವಿದ್ದರೂ ಕಚೇರಿ–ಮನೆ, ಮನೆ–ಕಚೇರಿಗೆ ಅಲೆದಾಡುವುದೂ ಅವರಿಗೆ ಸವಾಲೇ ಸರಿ.
ಆದರೆ ಇಲ್ಲೊಬ್ಬ ಮಹಿಳೆ ಅಚ್ಚರಿ ಎನ್ನುವಂತೆ ಉದ್ಯೋಗ ಹಾಗೂ ಕುಟುಂಬವನ್ನು ಸಮತೋಲಿಸಲು ವಿಮಾನದಲ್ಲಿ ಮನೆ–ಕಚೇರಿ, ಕಚೇರಿ–ಮನೆಗೆ ವಾರದಲ್ಲಿ ಐದು ದಿನ ಅಲೆದಾಡುತ್ತಾರೆ.
ಮಲೇಷಿಯಾದಲ್ಲಿ ಏರ್ ಏಷಿಯಾ ಕಂಪನಿಯಲ್ಲಿ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ಮೂಲದ ರಾಚಿಲ್ ಕೌರ್ ಎನ್ನುವ ಮಹಿಳೆ ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ವಾರದಲ್ಲಿ ಐದು ದಿನ ವಿಮಾನದಲ್ಲಿ ಪ್ರಯಾಣಿಸುತ್ತಾರೆ.
ರಾಚಿಲ್ ಕೌರ್ ಅವರ ಮನೆ ಮಲೇಷಿಯಾದ ಪೆನಾಂಗ್‌ನಲ್ಲಿದೆ. ಅವರು ಕೆಲಸ ಮಾಡುವ ಏರ್ ಏಷಿಯಾದ ಕಚೇರಿ ಮಲೇಷಿಯಾದ ಸೆಪಾಂಗ್‌ನಲ್ಲಿದೆ. ಇವೆರಡ ಅಂತರ 400 ಕಿ.ಮೀ.
ರಾಚಿಲ್ ಅವರ ಇಬ್ಬರು ಮಕ್ಕಳು ಮತ್ತು ರಾಚಿಲ್ ಅವರ ತಾಯಿ ಪೆನಾಂಗ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಅವರ ಇಬ್ಬರು ಮಕ್ಕಳು ಪೆನಾಂಗ್‌ನಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಕುಟುಂಬಕ್ಕೋಸ್ಕರ ತಾನು ಈ ರೀತಿ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಈ ಹಿಂದೆ ಅವರು ವಾರಾಂತ್ಯಕ್ಕೆ ಮಾತ್ರ ಬಂದು ಹೋಗುತ್ತಿದ್ದೆ. ಆದರೆ, ಈಗ ಮಕ್ಕಳು ದೊಡ್ಡವರಾಗುತ್ತಿರುವುದರಿಂದ ಅವರೊಟ್ಟಿಗೆ ನಾನು ಇರಲೇಬೇಕು ಎಂದು ಹೇಳಿದ್ದಾರೆ.
ಕೆಲಸಕ್ಕೆ ಹೋಗುವ ದಿನಗಳಲ್ಲಿ ರಾಚಿಲ್ ಅವರು ಪ್ರತಿದಿನ ಬೆಳಿಗ್ಗೆ 4ಕ್ಕೆ ಎದ್ದು 5 ಗಂಟೆಗೆ ಪೆನಾಂಗ್ ವಿಮಾನ ನಿಲ್ದಾಣದಲ್ಲಿರುತ್ತಾರೆ. 5.55ಕ್ಕೆ ವಿಮಾನ ಏರಿ ಬೆಳಿಗ್ಗೆ 7.45ಕ್ಕೆ ಸೆಪಾಂಗ್‌ನ ಏರ್ ಏಷಿಯಾ ಕಚೇರಿಯಲ್ಲಿರುತ್ತಾರೆ. ವಾಪಸ್ ಮನೆ ತಲುಪಿದಾಗ ರಾತ್ರಿ 7 ಗಂಟೆಯಾಗಿರುತ್ತದೆ.
ಈ ಪ್ರಕ್ರಿಯೆ ಇಷ್ಟು ಕಷ್ಟವಾದರೂ, ಹೆಚ್ಚು ಹಣ ಖರ್ಚಾದರೂ ಕಚೇರಿಯಲ್ಲಿ ಇದ್ದಾಗ ನೂರಕ್ಕೆ ನೂರರಷ್ಟು ಕೆಲಸದ ಕಡೆಗೆ ಗಮನ ಹರಿಸುವೆ. ಮನೆಯಲ್ಲಿದ್ದಾಗ ನೂರಕ್ಕೆ ನೂರರಷ್ಟು ಕುಟುಂಬದ ಕಡೆಗೆ ಗಮನ ಹರಿಸುವೆ ಎಂದು ಹೇಳುತ್ತಾರೆ.
ಇನ್ನೊಂದು ವಿಶೇಷ ಎಂದರೆ ರಾಚಿಲ್ ಅವರು ಸೆಪಾಂಗ್ ಹೋಗಲು ಈ ಮೊದಲು ಕೌಲಾಲಂಪುರ್‌ದಲ್ಲಿ ಬಾಡಿಗೆ ಮನೆ ಮಾಡಿದ್ದಾಗ ಅದಕ್ಕೆ ಕೊಡುತ್ತಿದ್ದ ಬಾಡಿಗೆ ಭಾರತೀಯ ರೂಪಾಯಿಯಲ್ಲಿ ₹25 ಸಾವಿರ. ಆದರೆ ರಾಚಿಲ್ ಅವರು ವಿಮಾನ ಪ್ರಯಾಣಕ್ಕೆ ತಿಂಗಳಿಗೆ ರಿಯಾಯಿತಿ ದರದಲ್ಲಿ ಪಾವತಿಸುತ್ತಿರುವುದು ₹20 ಸಾವಿರ!
ಪ್ರಯಾಣದ ವೇಳೆ ಓದು, ಸಂಗೀತದ ಜೊತೆ ಸಮಯ ಕಳೆಯುತ್ತೇನೆ. ಈ ಬಗ್ಗೆ ಹಲವರು ನೀನು ಹುಚ್ಚಿ ಎಂದು ಕಿಚಾಯಿಸುತ್ತಾರೆ. ಇದರಿಂದ ನನಗೇನು ಬೇಸರವಿಲ್ಲ ಎಂದಿದ್ದಾರೆ.
ಈ ಕುರಿತು ಮಲೇಷಿಯಾದ ಸಿಎನ್‌ಎ ಇನ್‌ಸೈಡರ್ ಎಂಬ ಚಾನಲ್‌ನ ಯೂಟ್ಯೂಬ್‌ನಲ್ಲಿ ರಾಚಿಲ್ ಅವರ ಸಂದರ್ಶನ ಪ್ರಸಾರವಾಗಿದೆ. ಈ ಸಂದರ್ಶನ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.