ADVERTISEMENT

ಸುಡಾನ್‌ನ ಬಂದರಿನಲ್ಲಿ ಮುಳುಗಿದ ಹಡಗು: 15 ಸಾವಿರ ಕುರಿಗಳು ನೀರುಪಾಲು

ಏಜೆನ್ಸೀಸ್
Published 12 ಜೂನ್ 2022, 15:46 IST
Last Updated 12 ಜೂನ್ 2022, 15:46 IST
ಮುಳುಗುತ್ತಿರುವ ಹಡಗಿನಿಂದ ಕುರಿಗಳನ್ನು ರಕ್ಷಿಸುತ್ತಿರುವುದು
ಮುಳುಗುತ್ತಿರುವ ಹಡಗಿನಿಂದ ಕುರಿಗಳನ್ನು ರಕ್ಷಿಸುತ್ತಿರುವುದು    

ಕಾರ್ಟೂಮ್ (ಸುಡಾನ್): ಸುಡಾನ್‌ನ ಕೆಂಪು ಸಮುದ್ರದ ಸುವಾಕಿನ್ ಬಂದರಿನಲ್ಲಿ ಸಾವಿರಾರು ಕುರಿಗಳಿದ್ದ ಹಡಗೊಂದು ಭಾನುವಾರ ಮುಳುಗಿದೆ. ಹಡಗಿನಲ್ಲಿದ್ದ ಬಹುತೇಕ ಕುರಿಗಳು ನೀರುಪಾಲಾಗಿದ್ದು, ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಡಾನ್‌ನಿಂದ ಸೌದಿ ಅರೇಬಿಯಾಕ್ಕೆ ತೆರಳಬೇಕಿದ್ದ ‘ಭಾದರ್‌–1’ ಹೆಸರಿನ ಹಡಗು ದರುಂತಕ್ಕೀಡಾಗಿದೆ. 15,800 ಕುರಿಗಳು ಅದರಲ್ಲಿದ್ದವು. ನಿಗದಿತ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಹೆಚ್ಚಿನ ಜಾನುವಾರುಗಳನ್ನು ಅದಕ್ಕೆ ತುಂಬಲಾಗಿತ್ತು. ಹೀಗಾಗಿಯೇ ಹಡಗು ಭಾನುವಾರ ಬೆಳಗ್ಗೆ ಮುಳುಗಿತು ಎಂದು ಸೂಡಾನ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಹಡಗಿನಲ್ಲಿ ಕೇವಲ 9,000 ಕುರಿಗಳನ್ನು ಮಾತ್ರ ಸಾಗಿಸಬಹುದಾಗಿತ್ತು ಎಂದು ಅವರು ಹೇಳಿದ್ದಾರೆ.

ADVERTISEMENT

ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿರುವ ಮತ್ತೊಬ್ಬ ಅಧಿಕಾರಿ, ಆರ್ಥಿಕವಾಗಿ ಮತ್ತು ಪರಿಸರದ ಮೇಲೆ ದುರಂತವು ಭಾರಿ ಪರಿಣಾಮ ಉಂಟು ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಹಡಗು ಮುಳುಗಿರುವುದರಿಂದ ಬಂದರು ಕಾರ್ಯಾಚರಣೆಯ ಮೇಲೆ ಪರಿಣಾಮ ಉಂಟಾಗಲಿದೆ’ ಎಂದು ತಿಳಿಸಿದರು.

‘ಹಡಗಿನಲ್ಲಿದ್ದ ಬಹುತೇಕ ಕುರಿಗಳೂ ಸಾವಿಗೀಡಾಗಿವೆ. ಹೀಗಾಗಿ ಪರಿಸರದ ಮೇಲೆ ದುಷ್ಪರಿಣಾಮವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಹಡಗು ಮುಳುಗಲು ಹಲವು ಗಂಟೆಗಳೇ ಬೇಕಾದವು ಎಂದು ರಾಷ್ಟ್ರೀಯ ರಫ್ತುದಾರರ ಸಂಘದ ಮುಖ್ಯಸ್ಥ ಒಮರ್ ಅಲ್-ಖಲೀಫಾ ತಿಳಿಸಿದರು.

ನೀರುಪಾಲದಾದ ಕುರಿಗಳ ಒಟ್ಟು ಮೌಲ್ಯವು ‘ಸುಮಾರು 14 ಮಿಲಿಯನ್ ಸೌದಿ ರಿಯಾಲ್ಗಳು (₹30 ಕೋಟಿ)' ಎಂದು ರಫ್ತುದಾರರ ಸಂಘದ, ಜಾನುವಾರು ವಿಭಾಗದ ಮುಖ್ಯಸ್ಥ ಸಲೇಹ್ ಸಲೀಂ ಹೇಳಿದರು.

ದುರಂತದಲ್ಲಿ 700 ಕುರಿಗಳು ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿವೆ. ಅವು ಬದುಕುಳಿಯುವ ಸಾಧ್ಯತೆಗಳಿಲ್ಲ ಎಂದು ಸಲಿಮ್‌ ಹೇಳಿದ್ದಾರೆ.

ಘಟನೆಯ ಬಗ್ಗೆ ಸಲೀಂ ತನಿಖೆಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.