ಲೆಬನಾನ್ ನಿವಾಸಿಗ ಪ್ರತಿಭಟನೆ
– ರಾಯಿಟರ್ಸ್ ಚಿತ್ರ
ಮಯಾಸ್ ಅಲ್ ಜಬಲ್ (ಲೆಬನಾನ್): ಪ್ರತಿಭಟನಾಕಾರರ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಮೂರು ಮಂದಿ ಸಾವಿಗೀಡಾಗಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಲೆಬನಾನ್‌ನಲ್ಲಿ ಭಾನುವಾರ ನಡೆದಿದೆ ಎಂದು ಲೆಬನಾನ್‌ನ ಆರೋಗ್ಯ ಇಲಾಖೆ ಹೇಳಿದೆ.
ಗಡಿ ಗ್ರಾಮವಾದ ಹೌಲಾದಲ್ಲಿ ಓರ್ವ ಪ್ರತಿಭಟನಾಕಾರ ಸಾವಿಗೀಡಾದರೆ, 10 ಮಂದಿ ಗಾಯಗೊಂಡಿದ್ದಾರೆ. ಐತ್ರೌನ್ ಹಾಗೂ ಬ್ಲಿಡಾ ಗ್ರಾಮದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಒಡಾಯಿಸೆ, ರಬ್ ತಲಾತಿನ್ ಹಾಗೂ ಫರ್ ಕಿಲಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಇಸ್ರೇಲಿ ಪಡೆಗಳ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಘಟನೆ ಬಗ್ಗೆ ಇಸ್ರೇಲ್ ಪಡೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕದನ ವಿರಾಮ ಒಪ್ಪಂದಂತೆ 60 ದಿನಗಳ ಒಳಗಾಗಿ ಇಸ್ರೇಲ್ ಪಡೆಗಳು ಸ್ಥಳದಿಂದ ತೆರವುಗೊಳ್ಳದ್ದನ್ನು ವಿರೋಧಿಸಿ ಪ್ರತಿಭಟನಾಕಾರರು ಗಡಿಯಲ್ಲಿರುವ ಹಲವು ಪ್ರದೇಶಗಳಿಗೆ ನುಗ್ಗಲು ಯತ್ನಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೆಲವರ ಕೈಯಲ್ಲಿ ಹಿಜ್ಬುಲ್ಲಾ ಧ್ವಜವೂ ಇತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಕದನ ವಿರಾಮ ಒಪ್ಪಂದ ಅನ್ವಯ ಇಸ್ರೇಲಿ ಪಡೆಗಳು 60 ದಿನಗಳ ಒಳಗಾಗಿ ಸ್ಥಳದಿಂದ ತೆರಳಬೇಕಿತ್ತು.
ಈ ಪ್ರದೇಶದಲ್ಲಿ ಲೆಬನಾನ್ ಇನ್ನೂ ತನ್ನ ಸೇನೆಯನ್ನು ನಿಯೋಜಿಸಿಲ್ಲ. ಇದರಿಂದ ಹಿಜ್ಬುಲ್ಲಾ ಬಂಡುಕೋರರು ಮತ್ತೆ ತಮ್ಮ ನೆಲೆಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಸೇನೆ ಇನ್ನೂ ಕೆಲವು ದಿನಗಳು ಅಲ್ಲಿರಬೇಕಾಗಿದೆ ಎಂದು ಇಸ್ರೇಲ್ ಸಮಜಾಯಿಷಿ ನೀಡಿದೆ. ಆದರೆ ಇಸ್ರೇಲ್ ತನ್ನ ಸೇನೆಯನ್ನು ಸ್ಥಳದಿಂದ ತೆರವುಗೊಳಿಸದೆ ನಾವು ಸೇನೆಯನ್ನು ನಿಯೋಜಿಸಲಾಗದು ಎಂದು ಲೆಬನಾನ್ ಹೇಳಿದೆ.
ಘಟನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್, ‘ಲೆಬನಾನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ನಿಮ್ಮ ಹಕ್ಕುಗಳು ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ನಾನು ಉನ್ನತ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.