ಸಾವು (ಪ್ರಾತಿನಿಧಿಕ ಚಿತ್ರ)
ಕೈರೊ: ಗಾಜಾ ಪಟ್ಟಿಯ ಪರಿಹಾರ ವಿತರಣಾ ಕೇಂದ್ರವೊಂದರ ಮೇಲೆ ಸೋಮವಾರ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಮೂವರು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
‘ಪರಿಹಾರ ವಿತರಣಾ ಕೇಂದ್ರ ಇರುವ ಜಾಗದಿಂದ 1 ಕಿ.ಮೀ. ದೂರದಲ್ಲಿ ದಾಳಿ ನಡೆದಿದೆ. ಕೇಂದ್ರದ ಸುತ್ತ ಯಾವುದೇ ಸಾವು ನೋವು ಸಂಭವಿಸಿಲ್ಲ. ಯಾರೂ ಗಾಯಗೊಂಡಿಲ್ಲ’ ಎಂದು ಅಮೆರಿಕ ಪ್ರಾಯೋಜಿತ ಗಾಜಾ ಹ್ಯೂಮಾನಿಟೇರಿಯನ್ ಫೌಂಡೇಷನ್ (ಜಿಎಚ್‌ಎಫ್) ಹೇಳಿದೆ.
‘ಗಾಜಾ ಪಟ್ಟಿಯ ದಕ್ಷಿಣದಲ್ಲಿರುವ, ರಫಾದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆದಿದೆ. ಈ ಪ್ರದೇಶ ಸಂಪೂರ್ಣ ಇಸ್ರೇಲ್ ಮಿಲಿಟರಿಯ ನಿಯಂತ್ರಣದಲ್ಲಿದೆ. ಘಟನೆಗೆ ಸಂಬಂಧಿಸಿದ ವರದಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
‘ಇಸ್ರೇಲ್ ಮಿಲಿಟರಿ ಈಚೆಗೆ ಇದೇ ಸ್ಥಳದಲ್ಲಿ ನಡೆಸಿದ ದಾಳಿಯಲ್ಲಿ 31 ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು’ ಎದು ಪ್ಯಾಲೆಸ್ಟೀನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಪರಿಹಾರ ಸಾಮಗ್ರಿಗಳನ್ನು ಪಡೆಯಲು ಸೇರಿದ್ದವರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನುವುದನ್ನು ಇಸ್ರೇಲ್ ಮಿಲಿಟರಿ ಅಲ್ಲಗಳೆದಿದೆ. ಸಾವಿಗೆ ಸಂಬಂಧಿಸಿದ ವರದಿಯು ಹಮಾಸ್‌ನ ಕಟ್ಟುಕಥೆ’ ಎಂದು ಜಿಎಚ್‌ಎಫ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.