ADVERTISEMENT

ಟಿಬೆಟ್‌ಗೆ ಪ್ರವಾಸಿಗರ ಹೆಚ್ಚಳ–ಐತಿಹಾಸಿಕ ಸ್ಥಳಗಳಲ್ಲಿ ಒತ್ತಡ

ಏಜೆನ್ಸೀಸ್
Published 20 ಜೂನ್ 2021, 6:17 IST
Last Updated 20 ಜೂನ್ 2021, 6:17 IST
ಟಿಬೆಟ್‌ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಲ್ಹಾಸಾದ ಪೊಟಾಲಾ ಪ್ಯಾಲೇಸ್‌. ಇದು ಯುನೆಸ್ಕೊ ಗುರುತಿಸಿರುವ ವಿಶ್ವದ ಪಾರಂಪರಿಕ ತಾಣವೂ ಹೌದು  –ಎಎಫ್‌ಪಿ ಚಿತ್ರ
ಟಿಬೆಟ್‌ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಲ್ಹಾಸಾದ ಪೊಟಾಲಾ ಪ್ಯಾಲೇಸ್‌. ಇದು ಯುನೆಸ್ಕೊ ಗುರುತಿಸಿರುವ ವಿಶ್ವದ ಪಾರಂಪರಿಕ ತಾಣವೂ ಹೌದು  –ಎಎಫ್‌ಪಿ ಚಿತ್ರ   

ಲ್ಹಾಸಾ: ಕೊರೊನಾದಿಂದಾಗಿ ಚೀನೀಯರು ವಿದೇಶಗಳಿಗೆ ಪ್ರವಾಸಕ್ಕೆ ಹೋಗುವುದು ಕಡಿಮೆಯಾಗಿದ್ದು, ಟಿಬೆಟ್‌ಗೆ ಹೆಚ್ಚಾಗಿ ಭೇಟಿ ನೀಡತೊಡಗಿದ್ದಾರೆ. ಇದರಿಂದಾಗಿ ಅತ್ಯಂತ ಸೂಕ್ಷ್ಮ ಪರಿಸರ ಮತ್ತು ಐತಿಹಾಸಿಕ ತಾಣವಾಗಿರುವ ಈ ಪ್ರದೇಶದಲ್ಲಿ ಒತ್ತಡ ಅಧಿಕವಾಗಿದೆ.

ದಲಾಯಿ ಲಾಮಾ ಅವರ ಹಿಂದಿನ ಮನೆಯಾಗಿರುವ ಪೊಟಾಲಾ ಪ್ಯಾಲೇಸ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ದಿನಕ್ಕೆ 5 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ಅಧಿಕ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೆ ಯುನೆಸ್ಕೊ ಗುರುತಿಸಿರುವ ವಿಶ್ವ ಪಾರಂಪರಿಕ ತಾಣವಾಗಿರುವ ಇಲ್ಲಿ ಸವಕಳಿಯಂತಹ ಸವಾಲುಗಳು ಎದುರಾಗುತ್ತವೆ ಎಂದು ಅರಮನೆಯ ಮುಖ್ಯ ಆಡಳಿತಾಧಿಕಾರಿ ಗೊಂಗರ್‌ ತಾಶಿ ಹೇಳಿದರು.

‘ಸಾಂಸ್ಕೃತಿಕ ಸ್ಮಾರಕಗಳನ್ನು ಬಳಸುವುದು ಮತ್ತು ರಕ್ಷಿಸುವುದೇ ನಮ್ಮ ಬಹುದೊಡ್ಡ ಸವಾಲು’ ಎಂದು ಅವರು ಹೇಳಿದರು.

ADVERTISEMENT

ಚೀನಾ ಸರ್ಕಾರವು ವಿದೇಶಿ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಪ್ರವಾಸದ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಪ್ರತಿಯೊಬ್ಬ ಪತ್ರಕರ್ತರ ಚಲನವಲನವನ್ನೂ ಚೀನಾ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದುದು ವಿಶೇಷವಾಗಿತ್ತು.

ಚೀನಾದ ಕಮ್ಯುನಿಸ್ಟ್‌ ಸೇನಾಪಡೆ 1951ರಲ್ಲಿ ಟಿಬೆಟ್‌ ಮೇಲೆ ದಾಳಿ ನಡೆಸಿತ್ತು. ಟಿಬೆಟ್‌ನ ಸಾಂಪ್ರದಾಯಿಕ ಧಾರ್ಮಿಕ ಮತ್ತು ರಾಜಕೀಯ ನಾಯಕರಾದ ದಲಾಯಿ ಲಾಮಾ ಅವರು 1959ರಲ್ಲಿ ಭಾರತಕ್ಕೆ ಪಲಾಯನ ಮಾಡಿ ಆಶ್ರಯ ಪಡೆಯಬೇಕಾಯಿತು.‌

ಶೇ 12.6ರಷ್ಟು ಅಧಿಕ:ಟಿಬೆಟ್‌ಗೆ ಪ್ರತಿ ವರ್ಷ ಲಕ್ಸಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. 2020ರಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ 2019ಕ್ಕೆ ಹೋಲಿಸಿದರೆ ಶೇ 12.6ರಷ್ಟು ಅಧಿಕವಾಗಿತ್ತು.

ಟಿಬೆಟ್‌ನ ಜನಸಂಖ್ಯೆ 35 ಲಕ್ಷ. ಆದರೆ ಅದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಭಾಗಕ್ಕೆ ಭೇಟಿ ನೀಡುತ್ತಿರುವುದರಿಂದ ಪರಿಸರ ಮತ್ತು ಸಂಸ್ಕೃತಿಯ ಸಂರಕ್ಷಣೆ ಕಷ್ಟವಾಗಿದೆ ಎಂದು ತಾಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.