ವಿಮಾನ ಅಪಘಾತದ ದೃಶ್ಯ
ಕೃಪೆ: X / @PantherMike182
ಸಿಯೊಲ್: ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ (ಇಂದು) ಬೆಳ್ಳಂಬೆಳಗ್ಗೆಯೇ ಭಾರಿ ದುರಂತ ಸಂಭವಿಸಿದೆ. ರನ್‌ವೇನಿಂದ ಜಾರಿದ ವಿಮಾನವೊಂದು ಗೋಡೆಗೆ ಡಿಕ್ಕಿಯಾದ ಪರಿಣಾಮ ಕನಿಷ್ಠ 120 ಮಂದಿ ಮೃತಪಟ್ಟಿದ್ದಾರೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಬಂದಿದ್ದ ವಿಮಾನವು, ನಿಲ್ದಾಣದಲ್ಲಿ ಇಳಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು 'ಯೊನ್ಹಾಪ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಅಪಘಾತಕ್ಕೀಡಾದ ವಿಮಾನ 'ಜೆಜು ಏರ್' ವಿಮಾನಯಾನ ಸಂಸ್ಥೆಯದ್ದು. ಅದರಲ್ಲಿ 6 ಸಿಬ್ಬಂದಿ, 175 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬದುಕುಳಿದಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಮಾನವು ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್ ಅವರು, ಪ್ರಯಾಣಿಕರ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಆದೇಶಿಸಿದ್ದಾರೆ.
ವರದಿಗಳನ್ನು ಪರಿಶೀಲಿಸುತ್ತಿರುವುದಾಗಿ ಎಂದು 'ಜೆಜು ಏರ್' ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.