ADVERTISEMENT

ಬಾಂಗ್ಲಾ: ರೈಲುಗಳ ಮುಖಾಮುಖಿ ಡಿಕ್ಕಿ, 16 ಮಂದಿ ಸಾವು

ಪಿಟಿಐ
Published 12 ನವೆಂಬರ್ 2019, 19:47 IST
Last Updated 12 ನವೆಂಬರ್ 2019, 19:47 IST
ರೈಲುಗಳು ಡಿಕ್ಕಿಯಾದ ಹೊಡೆತಕ್ಕೆ ನಜ್ಜುಗುಜ್ಜಾಗಿರುವ ಬೋಗಿ ಎಎಫ್‌ಪಿ ಚಿತ್ರ
ರೈಲುಗಳು ಡಿಕ್ಕಿಯಾದ ಹೊಡೆತಕ್ಕೆ ನಜ್ಜುಗುಜ್ಜಾಗಿರುವ ಬೋಗಿ ಎಎಫ್‌ಪಿ ಚಿತ್ರ   

ಢಾಕಾ: ಬಾಂಗ್ಲಾದೇಶದ ಬ್ರಹ್ಮನ್‌ಬರಿಯಾ ಜಿಲ್ಲೆಯಲ್ಲಿ ಮಂಗಳವಾರ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 16 ಜನರು ಅಸುನೀಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಚಿತ್ತಗಾಂಗ್‌ನಿಂದ ಹೊರಟ ಉದಯನ್ ಎಕ್ಸ್‌ಪ್ರೆಸ್ ಮಂಡೋಭಾಗ್ ರೈಲು ನಿಲ್ದಾಣದಲ್ಲಿ ಮುಂಜಾನೆ ಹಳಿ ಬದಲಿಸುವಾಗ ಎದುರುಗಡೆಯಿಂದ ಬಂದ ಟುರ್ನಾ ನಿಶಿತಾ (ಢಾಕಾದಿಂದ ಹೊರಟಿದ್ದ) ರೈಲು ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ರೈಲುಗಳ ಚಾಲಕರು ಸಂಕೇತಗಳನ್ನು ಪಾಲನೆ ಮಾಡದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಬ್ರಹ್ಮನ್‌ಬರಿಯಾದ ಜಿಲ್ಲಾಧಿಕಾರಿ ಹಯಾತ್‌–ಉದ್‌–ದೌಲಾ ತಿಳಿಸಿದ್ದಾರೆ.

ADVERTISEMENT

‘12 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮೃತ ಸಂಖ್ಯೆಯಲ್ಲಿ ಏರಿಕೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ನಾಲ್ಕು ಸಮಿತಿಗಳು ತನಿಖೆ ನಡೆಸಲಿವೆ. ಅಲ್ಲದೆ ಎರಡೂ ರೈಲುಗಳ ಚಾಲ ಕರು ಮತ್ತು ನಿರ್ವಾಹಕರನ್ನು ಅಮಾ ನತು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಈ ಕುರಿತು ಹೆಚ್ಚುವರಿ ಜಿಲ್ಲಾ ನ್ಯಾಯಾ ಧೀಶರಿಂದ ತನಿಖೆಗೆ ಆದೇಶಿಸಿದೆ.

ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಕುಟುಂಬ ಗಳಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ.

ಬಾಂಗ್ಲಾದೇಶದ ಅಧ್ಯಕ್ಷ ಅಬ್ದಲ್‌ ಹಮೀದ್‌, ಪ್ರಧಾನಿ ಶೇಖ್‌ ಹಸೀನಾ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.