ADVERTISEMENT

ಸುಪ್ರೀಂ ತೀರ್ಪಿನ ಬೆನ್ನಲ್ಲೇ ಶೇ 10ರಷ್ಟು ಸರ್‌ಚಾರ್ಜ್‌ ವಿಧಿಸಿದ ಟ್ರಂಪ್‌ ಆಡಳಿತ

ಶೇ 10ಕ್ಕೆ ಇಳಿದ ಟ್ರಂಪ್‌ ಪ್ರತಿಸುಂಕ

ಪಿಟಿಐ
Published 21 ಫೆಬ್ರುವರಿ 2026, 22:30 IST
Last Updated 21 ಫೆಬ್ರುವರಿ 2026, 22:30 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   

ಚಿತ್ರ ಕೃಪೆ: ಗೆಟ್ಟಿ

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಆಡಳಿತ ಭಾರತದ ಮೇಲೆ ಹೇರಿದ್ದ ಪ್ರತಿಸುಂಕವು ಅಲ್ಲಿನ ಸುಪ್ರೀಂ ಕೋರ್ಟ್‌ ನೀಡಿದ ಮಹತ್ವದ ತೀರ್ಪಿನಿಂದಾಗಿ ಶೇಕಡ 18ರಿಂದ
ಶೇ 10ಕ್ಕೆ ಇಳಿದಿದೆ. 

ADVERTISEMENT

ಶೇ 10ರಷ್ಟು ಪ್ರತಿಸುಂಕ ದರವು ಅಮೆರಿಕದೊಂದಿಗೆ ವ್ಯಾಪಾರ ನಡೆಸುವ ಜಗತ್ತಿನ ಎಲ್ಲ ದೇಶಗಳಿಗೆ  ಅನ್ವಯಿಸಲಿದೆ. ಭಾರತ, ಚೀನಾ ಸೇರಿದಂತೆ ವಿವಿಧ ದೇಶಗಳ ಮೇಲೆ ಹೇರಿದ್ದ ಹೆಚ್ಚುವರಿ ಸುಂಕ ರದ್ದು ಪಡಿಸುವುದನ್ನು ಶ್ವೇತಭವನ ಶನಿವಾರ ಅಧಿಕೃತವಾಗಿ ಘೋಷಿಸಿದೆ. ಇದೇ ವೇಳೆ, ಅಂತರರಾಷ್ಟ್ರೀಯ
ಪಾವತಿ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ವಹಿವಾಟಿನ ಮೌಲ್ಯ ಆಧರಿಸಿ ಶೇ 10ರಷ್ಟು ಸರ್‌ಚಾರ್ಜ್ ವಿಧಿಸುವುದಾಗಿ ಟ್ರಂಪ್‌ ಹೇಳಿದ್ದಾರೆ. 

ಶೇ 10ರಷ್ಟು ಸರ್‌ಚಾರ್ಜ್‌ ಫೆಬ್ರುವರಿ 24ರಿಂದ ಜಾರಿಗೆ ಬರುವಂತೆ ಮುಂದಿನ ಐದು ತಿಂಗಳಿಗೆ (150 ದಿನ) ಅನ್ವಯ ವಾಗಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಆದರೆ, ಈ ಸರ್‌ಚಾರ್ಜ್‌ ವಿಧಿಸುವಿಕೆಯು ಭಾರತದ ಯಾವ ಸರಕುಗಳಿಗೆ ಅನ್ವಯವಾಗಲಿದೆ ಮತ್ತು ರಫ್ತಿನ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಆರಂಭಗೊಂಡಿದೆ. ನಾವು ಈ ಒಪ್ಪಂದವನ್ನು ವಿಭಿನ್ನ ರೀತಿಯಲ್ಲಿ ಮಾಡಿಕೊಳ್ಳಲಿದ್ದೇವೆ
ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ 

ಅಧ್ಯಕ್ಷರ ಅಧಿಕಾರ ಬಳಸಿ ಸರ್‌ಚಾರ್ಜ್‌ 

1974ರ ವ್ಯಾಪಾರ ಕಾಯ್ದೆಯ ಅಡಿ ಅಧ್ಯಕ್ಷರಿಗೆ ಕೆಲವು ಆಮದು ನಿರ್ಬಂಧಗಳನ್ನು ಹೇರುವ ಅಧಿಕಾರ ಇದೆ. ಇದರಡಿ ಸರ್‌ಚಾರ್ಜ್ ವಿಧಿಸಲಾಗಿದೆ ಎಂದು ಶ್ವೇತ ಭವನದ ಫ್ಯಾಕ್ಟ್‌ಶೀಟ್‌ ವರದಿ ಹೇಳಿದೆ. ಖನಿಜಗಳು, ಇಂಧನ, ನೈಸರ್ಗಿಕ ಸಂಪನ್ಮೂಲಗಳು, ರಸಗೊಬ್ಬರ ಸೇರಿ ಅಮೆರಿಕದ ಅಗತ್ಯತೆಗೆ ಅನುಗುಣವಾಗಿ ಕೆಲ ಸರಕುಗಳು ಸರ್‌ಚಾರ್ಜ್‌ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಿದೆ.

ತೀರ್ಪಿನವರೆಗೆ ಯಾಕೆ ಕಾಯಲಿಲ್ಲ? 

ನವದೆಹಲಿ (ಪಿಟಿಐ): ವಿವಿಧ ದೇಶಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇರಿದ್ದ ಅಕ್ರಮ ಸುಂಕದ ಕುರಿತು ಅಲ್ಲಿನ ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗಾಗಿ ಭಾರತ ಯಾಕೆ ಕಾಯಲಿಲ್ಲ. ಈ ತೀರ್ಪಿಗೂ ಮುನ್ನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಧ್ಯಂತರ ಚೌಕಟ್ಟು ರೂಪಿಸುವ ಅಗತ್ಯ ಏನಿತ್ತು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

‘ಅಮೆರಿಕ ಮುಂದಿಟ್ಟ ವ್ಯಾಪಾರ ಒಪ್ಪಂದದ ಮೋಸದ ಜಾಲಕ್ಕೆ ಬೀಳಲು ಮೋದಿ ಸರ್ಕಾರಕ್ಕೆ ಇಷ್ಟೊಂದು ಆತುರವೇಕೆ, ಇದು ಮೋದಿ ಸರ್ಕಾರದ ಸುಳಿವು ಇಲ್ಲದ ವಿದೇಶಾಂಗ ನೀತಿಯೋ ಅಥವಾ ಏಕಪಕ್ಷೀಯ ಶರಣಾಗತಿಯೋ’ ಎಂದು ಅವರು ಪ್ರಶ್ನಿಸಿದ್ದಾರೆ. 

‘ಮೋದೀಜಿ, ನೀವು ಭಾರತೀಯರ ಪರವಾಗಿ ನಿಲ್ಲಿ ಮತ್ತು ಸತ್ಯವನ್ನು ಹೇಳಿ. ಭಾರತದ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳಲು ನಿಮ್ಮ ಮೇಲೆ ಒತ್ತಡ ಹೇರಿದವರು ಯಾರು, ಅದು ಎಪ್‌ಸ್ಟೈನ್ ಫೈಲ್ಸ್‌ ಆಗಿತ್ತೇ’ ಎಂದು ಅವರು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.