ADVERTISEMENT

ಭಾರತ ಮೂಲದ ಅಮೆರಿಕನ್ನರ ಮತ ಸೆಳೆಯಲು 4 ಮೈತ್ರಿಕೂಟ ರಚಿಸಿದ ಟ್ರಂಪ್‌ ಪ್ರಚಾರ ಪಡೆ

ಪಿಟಿಐ
Published 15 ಆಗಸ್ಟ್ 2020, 7:18 IST
Last Updated 15 ಆಗಸ್ಟ್ 2020, 7:18 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌    

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರಾಯ್ಕೆಗೆ ಭಾರತ- ಅಮೆರಿಕನ್, ಸಿಖ್, ಮುಸಲ್ಮಾನ ಮತ್ತು ಇತರೆ ದಕ್ಷಿಣ ಏಷ್ಯಾ ಸಮುದಾಯದ ಮತಗಳನ್ನು ಸೆಳೆಯಲು ಟ್ರಂಪ್ ಪರ ಪ್ರಚಾರ ಪಡೆ ನಾಲ್ಕು ಮೈತ್ರಿಕೂಟಗಳನ್ನು ರಚಿಸಿದೆ.

ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಸುಮಾರು 1.3 ಕೋಟಿ ಭಾರತ- ಅಮೆರಿಕನ್ನರು ತಮ್ಮ ಹಕ್ಕು ಚಲಾಯಿಸುವರು. ಈ ಪೈಕಿ 2 ಲಕ್ಷ ಮಂದಿ ಪೆನ್ನಿಸಿಲ್ವೇನಿಯಾ, 1.25 ಲಕ್ಷ ಮಿಚಿಗನ್‌ನಲ್ಲೇ ಇದ್ದಾರೆ.

‘ಇಂಡಿಯನ್ ವಾಯ್ಸ್ ಫಾರ್ ಟ್ರಂಪ್’, ‘ಹಿಂದೂ ವಾಯ್ಸ್ ಫಾರ್ ಟ್ರಂಪ್’, ‘ಸಿಖ್ಸ್ ಫಾರ್ ಟ್ರಂಪ್’ ಮತ್ತು ‘ಮುಸ್ಲಿಂ ವಾಯ್ಸ್ ಫಾರ್ ಟ್ರಂಪ್’ ಹೆಸರಿನ ಮೈತ್ರಿ ರಚನೆ ಮಾಡಿದ್ದು, ಆಯಾ ವರ್ಗದ ಮತಗಳ ಕ್ರೋಡೀಕರಣದ ಗುರಿ ಹೊಂದಿದೆ.

ADVERTISEMENT

74 ವರ್ಷದ ಟ್ರಂಪ್ 2ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿದ್ದು, ಈ ಬಾರಿ ಡೆಮಾಕ್ರಾಟಿಕ್‌ ಪಕ್ಷದ 77 ವರ್ಷದ ಜೋ ಬಿಡೆನ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ಜೋ ಬಿಡೆನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಇತ್ತೀಚೆಗೆ ಆಯ್ಕೆ ಮಾಡಿದ್ದು, ಅಮೆರಿಕದ ರಾಜಕಾರಣದಲ್ಲಿ ಭಾರತ-ಅಮೆರಿಕನ್ನರ ಮತಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕ್ಯಾಲಿಫೋರ್ನಿಯಾ ಅನ್ನು ಸೆನೆಟ್‌ನಲ್ಲಿ ಪ್ರತಿನಿಧಿಸುವ ಕಮಲಾ ಪರ ಈ ಮತಗಳು ಕ್ರೋಡೀಕರಣಗೊಂಡರೆ ಅದು ಫಲಿತಾಂಶದ ದಿಕ್ಕನ್ನೇ ಬದಲಿಸಬಹುದು ಎಂದು ಅರ್ಥೈಸಲಾಗಿದೆ.

ಈಗ ರಚಿಸಲಾಗಿರುವ ನಾಲ್ಕು ಮೈತ್ರಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಚಿಂತನೆಗಳನ್ನು ಬೆಂಬಲಿಸಲಿವೆ ಎಂದು ಈ ಮೈತ್ರಿಕೂಟಗಳ ಒಕ್ಕೂಟದ ನಿರ್ದೇಶಕರಾದ ಆ್ಯಶ್ಲೆ ಹಯೆಕ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.