ADVERTISEMENT

ಸುಂಕ ಸಮರ: ಭಾರತಕ್ಕೂ ಬಿಸಿ, ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಣೆ

ಏ.2ರಿಂದ ಪ್ರತಿ ಸುಂಕ: ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಣೆ * ಭಾರತ ವಿಧಿಸುವ ಸುಂಕ ಅಧಿಕ–ಟೀಕೆ

ಪಿಟಿಐ
Published 6 ಮಾರ್ಚ್ 2025, 0:30 IST
Last Updated 6 ಮಾರ್ಚ್ 2025, 0:30 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಅಧಿಕ ಸುಂಕ ವಿಧಿಸುತ್ತಿರುವ ಭಾರತದ ಮೇಲೆ ಏಪ್ರಿಲ್‌ 2ರಿಂದ ಪ್ರತಿಸುಂಕ ಆಕರಣೆ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಅಮೆರಿಕದ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವ ಇತರ ದೇಶಗಳಿಗೂ ಪ್ರತಿ ಸುಂಕ ವಿಧಿಸಲಾಗುವುದು ಎಂದೂ ಹೇಳಿದ್ದಾರೆ. 

‘ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಆಟೊಮೊಬೈಲ್‌ ಸರಕುಗಳಿಗೆ ಭಾರತ ಶೇ 100ಕ್ಕೂ ಅಧಿಕ ಸುಂಕ ವಿಧಿಸುತ್ತಿದೆ. ಇದು ಭಾರಿ ಅನ್ಯಾಯ’ ಎಂದು ಟೀಕಿಸಿದ್ದಾರೆ. 

ADVERTISEMENT

ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಟ್ರಂಪ್, ಈ ಮಾತು ಹೇಳಿದ್ದಾರೆ. ಹೀಗಾಗಿ, ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಅಮೆರಿಕ ಸಾರಿರುವ ‘ವ್ಯಾಪಾರ ಯುದ್ಧ’ದ ಬಿಸಿ ಭಾರತಕ್ಕೂ ತಟ್ಟಲಿದೆ.

‘ಅಮೆರಿಕದ ಕೆಲ ಸರಕುಗಳ ಮೇಲೆ ಭಾರತ ಶೇ 30ರಿಂದ ಶೇ 60ರಷ್ಟು ಹಾಗೂ ಕೆಲವು ಸರಕುಗಳ ಮೇಲೆ ಶೇ 70ರಷ್ಟು ಸುಂಕ ವಿಧಿಸುತ್ತಿದೆ. ಇದು ನಿಜವಾಗಿಯೂ ದೊಡ್ಡ ಸಮಸ್ಯೆ’ ಎಂದು ಹೇಳಿದ್ದಾರೆ.

‘ಉದಾಹರಣೆಗೆ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಭಾರತ ಶೇ 70ರಷ್ಟು ಸುಂಕ ವಿಧಿಸುತ್ತಿದೆ. ಹೀಗಾಗಿ, ಭಾರತದಲ್ಲಿ ಆ ಕಾರುಗಳನ್ನು ಮಾರಾಟ ಮಾಡುವುದು ಅಸಾಧ್ಯ’ ಎಂದು ಟ್ರಂಪ್‌ ವಿವರಿಸಿದ್ಧಾರೆ.

ಭಾರತ ಹಾಗೂ ಚೀನಾ ಸೇರಿದಂತೆ ಇತರ ದೇಶಗಳಿಗೆ ಪ್ರತಿ ಸುಂಕ ವಿಧಿಸುವುದಾಗಿ ಫೆಬ್ರುವರಿಯಲ್ಲಿ ಟ್ರಂಪ್‌ ಹೇಳಿದ್ದರು. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಟ್ರಂಪ್‌ ಈ ಮಾತನ್ನು ಪುನರುಚ್ಚರಿಸಿದ್ದರು.

‘ಅಮೆರಿಕದಲ್ಲಿ ನಿಮ್ಮ ಉತ್ಪನ್ನಗಳನ್ನು ತಯಾರಿಸುತ್ತಿಲ್ಲ ಎಂದಾದರೆ, ನೀವು ಸುಂಕ ಪಾವತಿಸಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಈ ಸುಂಕ ಅಧಿಕವೂ ಆಗಿರಲಿದೆ’ ಎಂದು ಟ್ರಂಪ್‌ ಹೇಳಿದಾಗ, ರಿಪಬ್ಲಿಕನ್‌ ಸಂಸದರು ಜೋರಾಗಿ ಚೆಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.

ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಟ್ರಂಪ್‌ ಅವರು ಸಂಸತ್ತನ್ನು ಉದ್ದೇಶಿಸಿ ಮಾಡುತ್ತಿರುವ ಮೊದಲ ಭಾಷಣ ಇದಾಗಿದೆ. 

‘ಹಲವು ದಶಕಗಳಿಂದ ಇತರ ದೇಶಗಳು ಅಮೆರಿಕ ಮೇಲೆ ಸುಂಕ ವಿಧಿಸುತ್ತಾ ಬಂದಿವೆ. ಈಗ, ಇತರ ದೇಶಗಳಿಗೆ ಪ್ರತಿ ಸುಂಕ ವಿಧಿಸುವ ಸರದಿ ನಮ್ಮದು’ ಎಂದು ಟ್ರಂಪ್ ಹೇಳಿದ್ದಾರೆ.

‘ಐರೋಪ್ಯ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು ಎಷ್ಟು ಸುಂಕ ವಿಧಿಸುತ್ತಿವೆ ಎಂಬುದು ನಿಮಗೆ ಗೊತ್ತೇ? ಇನ್ನೂ ಕೆಲವು ದೇಶಗಳು, ನಾವು ಆಕರಣೆ ಮಾಡುವುದಕ್ಕಿಂತ  ಅಧಿಕ ಸುಂಕಗಳನ್ನು ನಮಗೆ ವಿಧಿಸುತ್ತಿವೆ’ ಎಂದಿದ್ದಾರೆ.

‘ಅಮೆರಿಕ ನಡೆಸುವ ವ್ಯಾಪಾರ–ವಹಿವಾಟಿನ ಮೇಲೆ ಅಡ್ಡಪರಿಣಾಮ ಬೀರುವಂತಹ ಇಲ್ಲವೇ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಅಮೆರಿಕವನ್ನು ದೂರ ಇಡುವಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳುವ ದೇಶಗಳಿಗೆ, ಅಂಥದೇ ಕ್ರಮಗಳ ಮೂಲಕ ನಾವು ಉತ್ತರ ನೀಡುತ್ತೇವೆ’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಚೀನಾ ಹಾಗೂ ಇತರ ಕೆಲ ದೇಶಗಳ ವಿರುದ್ಧ ನಮ್ಮ ಸರ್ಕಾರ ಇಂತಹ ಕ್ರಮ ತೆಗೆದುಕೊಂಡಿದೆ. ಈ ಹಿಂದಿನ ಜೋ ಬೈಡನ್‌ ಸರ್ಕಾರ ಇಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇತರ ದೇಶಗಳೊಂದಿಗಿನ ವ್ಯಾಪಾರವು ಭಾರಿ ಪ್ರಮಾಣದ ಹಣ ಒಳಗೊಂಡಿತ್ತು. ಇದೇ ಕಾರಣಕ್ಕೆ, ಬೈಡನ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ.

₹11 ಲಕ್ಷ ಕೋಟಿ ಕಳೆದ ವರ್ಷ ಭಾರತದೊಂದಿಗೆ ಅಮೆರಿಕ ನಡೆಸಿರುವ ಒಟ್ಟು ಅಂದಾಜು ವ್ಯಾಪಾರ ₹3 ಲಕ್ಷ ಕೋಟಿ |ಕಳೆದ ವರ್ಷ ಅಮೆರಿಕ ಭಾರತಕ್ಕೆ ರಫ್ತು ಮಾಡಿರುವ ಸರಕುಗಳ ಮೌಲ್ಯ ₹7 ಲಕ್ಷ ಕೋಟಿ |ಕಳೆದ ವರ್ಷ ಭಾರತದಿಂದ ಅಮೆರಿಕ ಆಮದು ಮಾಡಿಕೊಂಡಿರುವ ಸರಕುಗಳ ಮೌಲ್ಯ
ವಿಶ್ವದ ಪ್ರತಿಯೊಂದು ದೇಶವೂ ಭಾರಿ ಸುಂಕ ವಿಧಿಸುವ ಮೂಲಕ ದಶಕಗಳಿಂದ ನಮ್ಮನ್ನು ಸುಲಿಗೆ ಮಾಡಿವೆ. ಇನ್ನು ಮುಂದೆ ಇಂಥ ಕ್ರಮಕ್ಕೆ ನಾವು ಅವಕಾಶ ನೀಡುವುದಿಲ್ಲ
ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷ

ಶಾಂತಿ ಒಪ್ಪಂದಕ್ಕೆ ರಷ್ಯಾ ಉತ್ಸುಕ: ಟ್ರಂಪ್

‘ಯುದ್ಧಕ್ಕೆ ಅಂತ್ಯ ಹಾಡಲು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧ ಎಂಬ ಸಂದೇಶವನ್ನು ರಷ್ಯಾ ನನಗೆ ರವಾನಿಸಿದೆ’ ಎಂದು ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ‘ಶಾಂತಿ ಸ್ಥಾಪನೆಗೆ ಸಂಬಂಧಿಸಿ ಮಾತುಕತೆ ನಡೆಸಲು ತಾನು ಸಿದ್ಧ. ಭದ್ರತೆ ಹಾಗೂ ಖನಿಜ ಒಪ್ಪಂದಕ್ಕೂ ಸಹಿ ಹಾಕಲು ಒಪ್ಪಿರುವೆ ಎಂಬುದಾಗಿ ಝೆಲೆನ್‌ಸ್ಕಿ ನನಗೆ ಪತ್ರ ಬರೆದಿದ್ದಾರೆ’ ಎಂದೂ ಟ್ರಂಪ್‌ ಹೇಳಿದ್ದಾರೆ.

ಸೌಹಾರ್ದ ಪರಿಹಾರಕ್ಕೆ ಭಾರತ ಯತ್ನ

ನವದೆಹಲಿ: ಪ್ರತಿ ಸುಂಕ ವಿಧಿಸುವ ಅಮೆರಿಕದ ಕ್ರಮದಿಂದ ಎದುರಾಗುವ ಸವಾಲುಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಭಾರತ ಹುಡುಕುತ್ತಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಫೆ.13ರಂದು ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿ ಪರಿಹಾರ ಕಂಡುಕೊಳ್ಳುವ ವಿಶ್ವಾಸವನ್ನು ಭಾರತ ಹೊಂದಿದೆ’ ಎಂದು ಮೂಲಗಳು ಹೇಳಿವೆ.

ಈ ನಡುವೆಯೇ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು ಅಮೆರಿಕ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್‌ ಹಾಗೂ ಅಮೆರಿಕ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್‌ ಅವರೊಂದಿಗೆ ಪ್ರಸ್ತಾವಿತ ಒಪ್ಪಂದ ಕುರಿತು ಮಾತುಕತೆ ನಡೆಸಲಿದ್ದಾರೆ. ಫೆ.1ರಂದು ಮಂಡಿಸಿದ್ದ 2025–26ನೇ ಸಾಲಿನ ಬಜೆಟ್‌ನಲ್ಲಿ ಬೌರ್‌ಬಾನ್ ವಿಸ್ಕಿ ವೈನ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ (ಇ.ವಿ) ಕ್ಷೇತ್ರಕ್ಕೆ ಸಂಬಂಧಿಸಿದ ಸುಂಕಗಳನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಕೆಲ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದ ಸುಂಕಗಳನ್ನು ತಗ್ಗಿಸುವ ಸಂದೇಶವನ್ನು ಅಮೆರಿಕಕ್ಕೆ ರವಾನಿಸುವ ಪ್ರಯತ್ನದ ಭಾಗವಾಗಿ ಭಾರತ ಇಂತಹ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿತ್ತು.

ಇನ್ನೊಂದೆಡೆ ತೈಲ ನೈಸರ್ಗಿಕ ಅನಿಲ ಸೇನಾ ಸಲಕರಣೆಗಳನ್ನು ತನ್ನಿಂದ ಖರೀದಿಸುವಂತೆ ಭಾರತದ ಮೇಲೆ ಒತ್ತಡ ಹೇರುವ ತಂತ್ರಕ್ಕೂ ಅಮೆರಿಕ ಮೊರೆ ಹೋಗಿದೆ. ಈ ಮೂಲಕ ಭಾರತದೊಂದಿಗಿನ ವ್ಯಾಪಾರ ಕೊರತೆಯನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ವ್ಯಾಪಾರ ಕೊರತೆಯು ₹3.9 ಲಕ್ಷ ಕೋಟಿ ಇದೆ. ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) 2023ರ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತದ 163 ಕಂಪನಿಗಳು ಅಮೆರಿಕದಲ್ಲಿ ₹3 ಲಕ್ಷ ಕೋಟಿ ಹೂಡಿಕೆ ಮಾಡಿದ್ದು 4.25 ಲಕ್ಷ ಉದ್ಯೋಗ ಸೃಷ್ಟಿಸಿವೆ.

ಡಬ್ಲ್ಯುಟಿಒಗೆ ಕೆನಡಾ ದೂರು

ಜಿನೀವಾ (ಎಎಫ್‌ಪಿ): ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸುಂಕ ಹೆಚ್ಚಳ ಮಾಡಿರುವುದಕ್ಕೆ ಸಂಬಂಧಿಸಿ ಅಮೆರಿಕ ವಿರುದ್ಧ ಕೆನಡಾ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ನೀಡಿದೆ. ಡಬ್ಲ್ಯುಟಿಒದಲ್ಲಿ ಕೆನಡಾ ರಾಯಭಾರಿ ನಾದಿಯಾ ಥಿಯೋಡರ್ ಅವರು ಈ ಕುರಿತು ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು‘ಅಮೆರಿಕ ಕೈಗೊಂಡಿರುವ ನಿರ್ಧಾರದ ವಿರುದ್ಧ ದೂರು ನೀಡದೇ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ’ ಎಂದಿದ್ದಾರೆ. ‘ನ್ಯಾಯಸಮ್ಮತವಲ್ಲದ ಸುಂಕಗಳನ್ನು ವಿಧಿಸಿರುವ ಅಮೆರಿಕ ಸರ್ಕಾರದ ಜೊತೆ ಸಮಾಲೋಚನೆ ನಡೆಸುವಂತೆ ಕೆನಡಾ ಸರ್ಕಾರದ ಪರವಾಗಿ ಡಬ್ಲ್ಯುಟಿಒಗೆ ಮನವಿ ಮಾಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.