ADVERTISEMENT

ಇಸ್ರೇಲ್ ಪ್ರಧಾನಿಗೆ ಕ್ಷಮಾದಾನ ನೀಡದ ಅಧ್ಯಕ್ಷ ಐಸಾಕ್‌ಗೆ ನಾಚಿಕೆಯಾಗಬೇಕು: ಟ್ರಂಪ್

ಏಜೆನ್ಸೀಸ್
Published 13 ಫೆಬ್ರುವರಿ 2026, 6:47 IST
Last Updated 13 ಫೆಬ್ರುವರಿ 2026, 6:47 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ‍ಫೇಸ್‌ಬುಕ್ ಚಿತ್ರ

ವಾಷಿಂಗ್ಟನ್: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಕ್ಷಮಾದಾನ ನೀಡದ ಅಧ್ಯಕ್ಷ ಐಸಾಕ್‌ ಹೆರ್ಜಾಗ್‌ಗೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ.

ADVERTISEMENT

ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್‌, ನೆತನ್ಯಾಹು ಅವರು ಯುದ್ಧಕಾಲದಲ್ಲಿ ದೇಶವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, 'ಅವರಿಗೆ ಕ್ಷಮಾದಾನ ನೀಡದಿರುವುದು ನಾಚಿಕೆಗೇಡು' ಎಂದು ಐಸಾಕ್‌ ವಿರುದ್ಧ ಗುಡುಗಿದ್ದಾರೆ.

ನೆತನ್ಯಾಹು ಅವರು ಬುಧವಾರ ವಾಷಿಂಗ್ಟನ್‌ನಲ್ಲಿ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು. ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಅವರು ಎರಡನೇ ಅವಧಿಗೆ ಕಳೆದವರ್ಷ ಅಧಿಕಾರ ವಹಿಸಿಕೊಂಡ ನಂತರ ಏಳನೇ ಬಾರಿಗೆ ಸಭೆ ನಡೆಸಿದ ಉಭಯ ನಾಯಕರು, ಇರಾನ್ ಅಣ್ವಸ್ತ್ರ ಯೋಜನೆ ಹಾಗೂ ಖಂಡಾಂತರ ಕ್ಷಿಪಣಿಗಳ ಕುರಿತು ಚರ್ಚಿಸಿದ್ದರು.

ನೆತನ್ಯಾಹು ವಿರುದ್ಧ ಭ್ರಷ್ಟಾಚಾರ, ವಂಚನೆ ಹಾಗೂ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ, ಅಧಿಕಾರದಲ್ಲಿದ್ದಾಗಲೇ ಅಪರಾಧ ಕೃತ್ಯಗಳ ಆರೋಪ ಎದುರಿಸುತ್ತಿರುವ ಮೊದಲ ಪ್ರಧಾನಿ ಎನಿಸಿರುವ ನೆತನ್ಯಾಹು, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಹಾಗೆಯೇ, ಕ್ಷಮಾದಾನ ಕೋರಿ ಅಧ್ಯಕ್ಷರ ಕಚೇರಿಗೆ ಪತ್ರ ಬರೆದಿದ್ದರು.

ಇದೇ ವಿಚಾರವಾಗಿ ಪ್ರಧಾನಿಗೆ ಕ್ಷಮಾದಾನ ನೀಡಬೇಕು ಎಂದು ಹಲವು ಬಾರಿ ಸಾರ್ವಜನಿಕವಾಗಿಯೇ ಒತ್ತಾಯಿಸಿರುವ ಟ್ರಂಪ್‌, ಹೆರ್ಜಾಗ್‌ ಅವರು ಶೀಘ್ರವೇ ಕ್ಷಮಾಪಣೆ ನೀಡಲಿದ್ದಾರೆ ಎಂದು 2025ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು.

ಆದರೆ, ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಹೆರ್ಜಾಗ್ ಕಚೇರಿ, ಇಸ್ರೇಲ್‌ ಕಾನೂನಿನನ್ವಯ, ಕ್ಷಮಾದಾನ ನೀಡುವ ಅಧಿಕಾರ ಅಧ್ಯಕ್ಷರಿಗೆ ಇದೆ. ಆದರೆ, ವಿಚಾರಣೆ ನಡೆಯುತ್ತಿರುವ ಹೊತ್ತಲ್ಲಿ ಆ ರೀತಿ ಮಾಡಿದ ಯಾವುದೇ ಉದಾಹರಣೆಗಳು ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.