ಡೊನಾಲ್ಡ್ ಟ್ರಂಪ್
ಟೆಲ್ ಅವಿವ್: 'ಗಾಜಾದಲ್ಲಿ ಯುದ್ಧ ಶಮನಗೊಳಿಸುವ ಮತ್ತು ಉಳಿದ ಒತ್ತೆಯಾಳುಗಳ ಬಿಡುಗಡೆ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಶಾಂತಿ ಯೋಜನೆಯ ಕೆಲವು ಅಂಶಗಳನ್ನು ಒಪ್ಪಿಕೊಳ್ಳುತ್ತೇವೆ' ಎಂದು ಹಮಾಸ್ ತಿಳಿಸಿದೆ.
ಆದರೆ, ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾತುಕತೆ ನಡೆಸಬೇಕಿದೆ ಎಂದೂ ಅದು ಶನಿವಾರ ಹೇಳಿದೆ.
ಹಮಾಸ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಟ್ರಂಪ್ ಅವರ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಇಸ್ರೇಲ್ ಸೇನೆ ಶನಿವಾರ ಮಾಹಿತಿ ನೀಡಿದೆ.
‘ಇಸ್ರೇಲ್‌ನ ನಾಯಕರು ಯೋಜನೆ ಅನುಷ್ಠಾನಕ್ಕೆ ಸಿದ್ಧತಾ ಕಾರ್ಯವನ್ನು ಮುಂದುವರಿಸಲು ಸೂಚಿಸಿದ್ದಾರೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇಸ್ರೇಲ್ ಗಾಜಾ ಮೇಲೆ ಸದ್ಯಕ್ಕೆ ಯಾವುದೇ ದಾಳಿ ಮಾಡುತ್ತಿಲ್ಲ ಆದರೆ ಗಾಜಾ ಪಟ್ಟಿಯಿಂದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ ಎಂದು ಸ್ಪಷ್ವಪಡಿಸಿದ್ದಾರೆ.
ತನ್ನ ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದ ಬಳಿಕ, ಟ್ರಂಪ್ ಅವರು ಗಾಜಾ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದರು. ‘ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಳ್ಳುವುದಾಗಿ ಹಮಾಸ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಸಹ ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂಬುದಾಗಿ ನಾನು ನಂಬುತ್ತೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲ್–ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳ ವಿನಿಮಯ ಕುರಿತ ಯೋಜನೆಯ ಜಾರಿಗೆ ಟ್ರಂಪ್ ಉತ್ಸುಕರಾಗಿದ್ದಾರೆ. ಈ ವಾರದ ಆರಂಭದಲ್ಲಿ ಟ್ರಂಪ್ ಅವರು ಈ ಕುರಿತು ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಯಿತು. ಅಲ್ಲದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ ಟ್ರಂಪ್ ಯೋಜನೆಯನ್ನು ಅನುಮೋದಿಸಿ, ‘ಯುದ್ಧ ಅಂತ್ಯಗೊಳಿಸಲು ಇಸ್ರೇಲ್ ಬದ್ಧವಾಗಿದೆ’ ಎಂದು ಹೇಳಿದ್ದರು.
ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆಗೆ ಮತ್ತು ಇಸ್ರೇಲ್ ಬಂಧನದಲ್ಲಿ ಇರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಈಜಿಪ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧ: ಹಮಾಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆ ಅನ್ವಯ ತನ್ನ ಬಳಿ ಇರುವ ಇಸ್ರೇಲ್‌ನ ಎಲ್ಲ ಜೀವಂತ ಒತ್ತೆಯಾಳುಗಳನ್ನು ಮತ್ತು ಕೆಲ ಒತ್ತೆಯಾಳುಗಳ ಮೃತ ದೇಹಗಳನ್ನು ಹಿಂದಿರುಗಿಸಲು ಸಿದ್ಧ ಇರುವುದಾಗಿ ಹಮಾಸ್ ತಿಳಿಸಿದೆ. ಯೋಜನೆ ಪ್ರಕಾರ ಹಮಾಸ್ ತನ್ನ ಬಳಿ ಇರುವ 48 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಿದೆ. ಈ ಪೈಕಿ 20 ಜನರು ಜೀವಂತ ಇದ್ದಾರೆ ಎಂದು ನಂಬಲಾಗಿದೆ. ಈ ಪ್ರಕ್ರಿಯೆ ಮೂರು ದಿನಗಳಲ್ಲಿ ನೆರವೇರಬೇಕು ಎಂದು ಹೇಳಲಾಗಿದೆ. ಇದಲ್ಲದೆ ಹಮಾಸ್ ಅಧಿಕಾರವನ್ನು ಬಿಡಬೇಕು ಮತ್ತು ನಿಶ್ಶಸ್ತ್ರಗೊಳ್ಳಬೇಕು ಎಂದೂ ಪ್ರಸ್ತಾಪಿತ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ‘ಅಧಿಕಾರ ಬಿಡಲು ಸಿದ್ಧವಿರುವುದಾಗಿ ಹೇಳಿರುವ ಹಮಾಸ್ ನಿಶ್ಶಸ್ತ್ರೀಕರಣದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಗಾಜಾ ಭವಿಷ್ಯ ಮತ್ತು ಪ್ಯಾಲೆಸ್ಟೀನಿಯರ ಹಕ್ಕು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮತ್ತಷ್ಟು ಮಾತುಕತೆ ಬಾಕಿ ಇದೆ ಎಂಬುದಾಗಿ ಅದು ತಿಳಿಸಿದೆ’ ಎಂದು ಮೂಲಗಳು ಹೇಳಿವೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಒಟ್ಟು 1200 ಜನರನ್ನು ಕೊಂದಿತ್ತು. ಅಲ್ಲದೆ 251 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಈ ಸಂಬಂಧ ಗಾಜಾ ಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ 66000ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಎಂದು ಗಾಜಾದ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.