ADVERTISEMENT

ಟ್ರಂಪ್‌ – ರುಟ್ಟೆ ಮಾತುಕತೆ: ಗ್ರೀನ್‌ಲ್ಯಾಂಡ್‌ ವಶಕ್ಕೆ ರೂಪುರೇಷೆ ಸಿದ್ಧ

ಪಿಟಿಐ
Published 22 ಜನವರಿ 2026, 16:27 IST
Last Updated 22 ಜನವರಿ 2026, 16:27 IST
<div class="paragraphs"><p>ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ದಾವೋಸ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್‌ ರುಟ್ಟೆ ಅವರು ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಶೃಂಗದಲ್ಲಿ ಬುಧವಾರ ಭೇಟಿಯಾಗಿ ಗ್ರೀನ್‌ಲ್ಯಾಂಡ್‌ ಕುರಿತಾಗಿ ಮಾತುಕತೆ ನಡೆಸಿದರು. ಈ ಬಳಿಕ, ಗ್ರೀನ್‌ಲ್ಯಾಂಡ್‌ ವಿಚಾರದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿವೆ.

ಮಾತುಕತೆ ಬಳಿಕ ಮಾತನಾಡಿದ ಟ್ರಂಪ್‌, ‘ಗ್ರೀನ್‌ಲ್ಯಾಂಡ್‌ ವಿಚಾರವಾಗಿ ನನ್ನನ್ನು ಸಂತುಷ್ಟಗೊಳಿಸುವ ಒಪ್ಪಂದವೊಂದರ ರೂಪುರೇಷೆ ಸಿದ್ಧಗೊಂಡಿದೆ. ಆದ್ದರಿಂದ, ಆ ದೇಶವನ್ನು ವಶಪಡಿಸಿಕೊಳ್ಳಲು ಸೇನೆ ಬಳಸುವುದರಿಂದ ಹಿಂದೆ ಸರಿದಿದ್ದೇನೆ’ ಎಂದಿದ್ದಾರೆ. ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳಲು ತಡೆಯೊಡ್ಡುವ ಐರೋಪ್ಯ ದೇಶಗಳ ಮೇಲೆ ಸುಂಕ ಹೇರುವುದಾಗಿ ಟ್ರಂಪ್‌ ಬೆದರಿಕೆ ಒಡ್ಡಿದ್ದರು. ಮಾತುಕತೆ ಬಳಿಕ, ಈ ಹೇಳಿಕೆಯಿಂದಲೂ ಟ್ರಂಪ್‌ ಯೂಟರ್ನ್‌ ಹೊಡೆದಿದ್ದಾರೆ.

ADVERTISEMENT

‘ಆರ್ಕ್‌ಟಿಕ್ ‍ಪ್ರದೇಶದ ಭದ್ರತೆಗಾಗಿ ನ್ಯಾಟೊ ಪ್ರಮುಖರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ನಮಗೆ ಗ್ರೀನ್‌ಲ್ಯಾಂಡ್‌ಗೆ ಪ್ರವೇಶ ದೊರೆಯಲಿದೆ. ನಮಗೆ ಬೇಕಾದ ಹಾಗೆ ನಮ್ಮ ಸೇನೆಯೂ ಪ್ರವೇಶ ಪಡೆಯಲಿದೆ. ನಮ್ಮ ಒಪ್ಪಂದದ ಮಾತುಕತೆಯು ಪೂರ್ಣಗೊಂಡರೆ, ನಮ್ಮ ಕ್ಷಿಪಣಿ ದಾಳಿ ರಕ್ಷಣಾ ವ್ಯವಸ್ಥೆ ‘ಗೋಲ್ಡನ್‌ ಡೋಮ್‌’ ಅಳವಡಿಸುತ್ತೇವೆ’ ಎಂದಿದ್ದಾರೆ.

‘ರುಟ್ಟೆ ಅವರು ಟ್ರಂಪ್‌ ಅವರೊಂದಿಗಿನ ಮಾತುಕತೆಯಲ್ಲಿ ಯಾವುದೇ ದೇಶದ ಸಾರ್ವಭೌಮತ್ವದ ಕುರಿತು ರಾಜಿ ಮಾಡಿಕೊಂಡಿಲ್ಲ. ರಷ್ಯಾ ಮತ್ತು ಚೀನಾ ದೇಶಗಳಿಗೆ ಆರ್ಥಿಕವಾಗಿ ಅಥವಾ ಸೇನಾ ವಿಚಾರಗಳು ಸೇರಿ ಯಾವುದೇ ರೀತಿಯಲ್ಲಿಯೂ ಗ್ರೀನ್‌ಲ್ಯಾಂಡ್‌ ಪ್ರವೇಶ ಸಿಗಬಾರದು ಎನ್ನುವುದರ ಕುರಿತು ಮಾತ್ರವೇ ಟ್ರಂಪ್‌ ಅವರೊಂದಿಗೆ ಮುಂದಿನ ಚರ್ಚೆ ಸಾಗಲಿದೆ’ ಎಂದು ನ್ಯಾಟೊದ ವಕ್ತಾರ ಅಲಿಸನ್‌ ಹಾರ್ಟ್‌ ಪ್ರತಿಕ್ರಿಯಿಸಿದರು.

ಗ್ರೀನ್‌ಲ್ಯಾಂಡ್‌ ಅನ್ನು ರಷ್ಯಾ ಮತ್ತು ಚೀನಾದಿಂದ ರಕ್ಷಿಸಲು ಆರ್ಕ್‌ಟಿಕ್ ಭೂ ಭಾಗದಲ್ಲಿರುವ ನ್ಯಾಟೊದ ಏಳೂ ದೇಶಗಳು ಹೇಗೆ ಒಗ್ಗೂಡಿ ಕೆಲಸ ಮಾಡಬೇಕು ಎಂಬ ಕಾರ್ಯ ಯೋಜನೆಯು ಟ್ರಂಪ್‌ ಅವರ ಭೇಟಿ ಬಳಿಕ ರೂಪುಗೊಂಡಿತು.
– ಮಾರ್ಕ್‌ ರುಟ್ಟೆ, ನ್ಯಾಟೊ ಪ್ರಧಾನ ಕಾರ್ಯದರ್ಶಿ (ಟ್ರಂಪ್‌ ಜೊತೆಗಿನ ಮಾತುಕತೆ ಬಳಿಕ ನೀಡಿದ ಹೇಳಿಕೆ)

‘ಸಾರ್ವಭೌಮತ್ವದ ಕುರಿತು ಚರ್ಚೆಯೇ ಇಲ್ಲ’

ಭದ್ರತೆ ಹೂಡಿಕೆ ಮತ್ತು ಆರ್ಥಿಕ ವಿಚಾರಗಳಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ನಮ್ಮ ಸಾರ್ವಭೌಮತ್ವದ ವಿಚಾರದಲ್ಲಿ ಮಾತುಕತೆ ಸಾಧ್ಯವೇ ಇಲ್ಲ. ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ವಿಚಾರದಲ್ಲಿ ಈ ದೇಶಗಳೇ ನಿರ್ಧಾರ ತೆಗೆದುಕೊಳ್ಳುತ್ತವೆ. ಗೋಲ್ಡನ್‌ ಡೋಮ್‌ ವಿಚಾರದಲ್ಲಿಯೂ ಮಾತುಕತೆ ನಡೆಸುತ್ತೇವೆ. ಆದರೆ ಇದು ನಮ್ಮ ಸಾರ್ವಭೌಮತ್ವವನ್ನು ಗೌರವಿಸಿಯೇ ಆಗಬೇಕು ಮೆಟ್ಟೆ ಫ್ರೆಡೆರಿಕ್‌ಸೆನ್‌ ಡೆನ್ಮಾರ್ಕ್‌ ಪ್ರಧಾನಿ

‘ಉಕ್ರೇನ್‌–ರಷ್ಯಾ ಯುದ್ಧ ನಿಲ್ಲಲೇಬೇಕು’

ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ದಾವೋಸ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ‘ಬಹಳಷ್ಟು ಜನರು ಮೃತಪಟ್ಟಿದ್ದಾರೆ. ಯುದ್ಧ ನಿಲ್ಲಲೇಬೇಕು ಎನ್ನುವುದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ನನ್ನ ಸಂದೇಶ’ ಎಂದು ಟ್ರಂಪ್‌ ಹೇಳಿದರು.

‘ನಾನು ಝೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿದೆ. ಮಾತುಕತೆಯು ಉತ್ತಮವಾಗಿತ್ತು. ನಮ್ಮ ನಿಯೋಗವು ಸದ್ಯದಲ್ಲಿಯೇ ಪುಟಿನ್‌ ಅವರನ್ನು ಭೇಟಿ ಮಾಡಲಿದೆ. ಯುದ್ಧವನ್ನು ನಿಲ್ಲಿಸಲೇಬೇಕು. ಇದು ಸಾಧ್ಯವಾಗದೇ ಇದ್ದಲ್ಲಿ ನಮಗೇ ಅವಮಾನ’ ಎಂದು ಟ್ರಂಪ್‌ ಹೇಳಿದರು. ‘ಟ್ರಂಪ್‌ ಅವರೊಂದಿಗೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆಯಿತು. ನಮ್ಮ ದೇಶದ ಪರವಾಗಿಯೇ ಎಲ್ಲವೂ ನಡೆಯಿತು’ ಎಂದು ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಷಣ ಮಾಡಿದ ಬಳಿಕ ಝೆಲೆನ್‌ಸ್ಕಿ ಪ್ರತಿಕ್ರಿಯಿಸಿದರು. ಅಮೆರಿಕದ ನಿಯೋಗವು ಉಕ್ರೇನ್‌ ಅಧಿಕಾರಿಗಳನ್ನೂ ಪ್ರತ್ಯೇಕವಾಗಿ ಭೇಟಿ ಮಾಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.