ಇರಾನ್ ಮೇಲೆ ಅಮೆರಿಕ ದಾಳಿ
ಜೆರುಸಲೇಂ: ‘ಅಮೆರಿಕದ ದಾಳಿಯಿಂದ ಇರಾನ್‌ನ ಅಣು ಘಟಕಗಳಿಗೆ ಯಾವುದೇ ಹಾನಿಯಾಗಿಲ್ಲ. ಘಟಕಗಳಿಗೆ ಪ್ರವೇಶ ಕಲ್ಪಿಸುವ ಜಾಗಕ್ಕೆ ಹಾನಿಯಾಗಿದೆಯಷ್ಟೆ. ಪರಮಾಣು ಯೋಜನೆಯ ಪ್ರಗತಿಯಲ್ಲಿ ಇರಾನ್‌ಅನ್ನು ಕೆಲವೇ ತಿಂಗಳು ಹಿಂದಕ್ಕೆ ತಳ್ಳಿದ್ದೇವೆ’ ಎಂಬ ಉಲ್ಲೇಖವಿರುವ ಅಮೆರಿಕದ ರಕ್ಷಣಾ ಇಲಾಖೆಯ ಗುಪ್ತಚರ ವರದಿ ಬುಧವಾರ ಸೋರಿಕೆಯಾಗಿದೆ.
ವರದಿ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವರದಿಯು ಇನ್ನೂ ಪೂರ್ಣಗೊಂಡಿಲ್ಲ. ಈ ವರದಿಯೇ ಅಂತಿಮವಲ್ಲ. ನಮ್ಮ ದಾಳಿಯಿಂದ ಇರಾನ್‌ನ ಪರಮಾಣು ಯೋಜನೆಯ ಪ್ರಗತಿಯನ್ನು ಹಲವು ದಶಕಗಳ ಹಿಂದಕ್ಕೆ ಕಳುಹಿಸಿದ್ದೇವೆ. ನಮ್ಮ ದಾಳಿಯು ಅವರ ಅಣು ಘಟಕಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ’ ಎಂದಿದ್ದಾರೆ.
ಇಸ್ರೇಲ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇರಾನ್‌ನ ಅಣು ಘಟಕಗಳಿಗೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದನ್ನು ಈಗಲೇ ಅಂದಾಜು ಮಾಡಲಾಗದು. ನಾವು ಅವರ ಅಣು ಯೋಜನೆಗೆ ತೀವ್ರ ಹಾನಿಯುಂಟು ಮಾಡಿದ್ದೇವೆ. ಅವರ ಯೋಜನೆಯ ಪ್ರಗತಿಯನ್ನು ಕೆಲವು ವರ್ಷಗಳ ಹಿಂದಕ್ಕೆ ತಳ್ಳಿದ್ದೇವೆ ಎಂಬುದನ್ನಂತೂ ಹೇಳಬಹುದು’ ಎಂದಿದೆ.
ಗುಪ್ತಚರ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮೂಲಗಳನ್ನು ಆಧರಿಸಿ ಅಮೆರಿಕ ಮಾಧ್ಯಮಗಳು ವರದಿಯ ಭಾಗಗಳನ್ನು ಪ್ರಕಟಿಸಿವೆ. ಟ್ರಂಪ್ ಅವರು ನೆದರ್ಲೆಂಡ್ಸ್‌ನ ದಿ ಹೇಗ್‌ನಲ್ಲಿ ನ್ಯಾಟೊ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ವರದಿಯ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೆಟೆ ಹೆಗ್‌ಸೆತ್ ಅವರು ಗುಪ್ತಚರ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ‘ಗುಪ್ತಚರ ವರದಿಯ ಮಾಹಿತಿಗಳು ಹೇಗೆ ಸೋರಿಕೆಯಾದವು ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು. ಈ ವರದಿಯಲ್ಲಿನ ಅಂಶಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ’ ಎಂದು ರುಬಿಯೊ ಪ್ರತಿಕ್ರಿಯಿಸಿದರು.
ದಿನದ ಬೆಳವಣಿಗೆ
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (ಐಎಇಎ) ನೀಡುವ ಸಹಕಾರವನ್ನು ರದ್ದು ಮಾಡಬೇಕು ಎನ್ನುವ ಬಗ್ಗೆ ಇರಾನ್‌ನ ಸಂಸದರು ಸಂಸತ್‌ನಲ್ಲಿ ಬುಧವಾರ ಮತಚಲಾಯಿಸಿದ್ದಾರೆ.
ಕದನ ವಿರಾಮಕ್ಕೆ ಇರಾನ್ ಅನ್ನು ಒಪ್ಪಿಸುವಂತೆ ಅಮೆರಿಕವು ಫ್ರಾನ್ಸ್‌ಗೆ ಮನವಿ ಮಾಡಿತ್ತು ಎಂದು ಫ್ರಾನ್ಸ್‌ನ ರಾಯಭಾರಿ ಮೂಲಗಳು ಹೇಳಿವೆ. ‘ಅಮೆರಿಕವು ಕದನ ವಿರಾಮ ಬಯಸುತ್ತಿದೆ ಎಂಬುದನ್ನು ಇರಾನ್‌ಗೆ ತಿಳಿಸುವಂತೆ ನಮಗೆ ಕೇಳಿಕೊಂಡರು. ನಾವು ಕೂಡ ಇರಾನ್‌ನೊಂದಿಗೆ ಮಾತುಕತೆ ನಡೆಸಿದೆವು’ ಎಂದಿವೆ
ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ ಮೂವರನ್ನು ಇರಾನ್ ಬುಧವಾರ ಗಲ್ಲಿಗೇರಿಸಿದೆ. ಬೇಹುಗಾರಿಕೆ ವಿಚಾರವಾಗಿಯೇ ಜೂನ್ 16ರಿಂದ ಬುಧವಾರದವರೆಗೆ ಒಟ್ಟು ಆರು ಮಂದಿಯನ್ನು ಇರಾನ್ ಗಲ್ಲಿಗೇರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.