ADVERTISEMENT

ರಷ್ಯಾ–ಉಕ್ರೇನ್‌ ಯುದ್ಧ: ಟ್ರಂಪ್‌ ಗಡುವು ಮುಗಿಯಲು ಕೆಲವೇ ದಿನ ಬಾಕಿ

ಏಜೆನ್ಸೀಸ್
Published 4 ಆಗಸ್ಟ್ 2025, 15:31 IST
Last Updated 4 ಆಗಸ್ಟ್ 2025, 15:31 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌ </p></div>

ಡೊನಾಲ್ಡ್‌ ಟ್ರಂಪ್‌

   

ಪಿಟಿಐ ಚಿತ್ರ

ಮಾಸ್ಕೊ: ಉಕ್ರೇನ್‌ ಜತೆಗಿನ ಯುದ್ಧ ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಷ್ಯಾಕ್ಕೆ ನೀಡಿರುವ ಗಡುವು ಸಮೀಪಿಸುತ್ತಿದ್ದು, ರಷ್ಯಾ–ಉಕ್ರೇನ್‌ ಯುದ್ಧವು ಈ ವಾರ ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆಯಿದೆ.

ADVERTISEMENT

ಉಕ್ರೇನ್‌ ಜತೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಟ್ರಂಪ್‌ ನೀಡಿರುವ ಗಡುವು ಶುಕ್ರವಾರ ಕೊನೆಗೊಳ್ಳಲಿದೆ. ಯುದ್ಧ ನಿಲ್ಲಿಸದಿದ್ದರೆ ಇನ್ನಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕದ ಅಧ್ಯಕ್ಷರು ಎಚ್ಚರಿಸಿದ್ದಾರೆ.

ಟ್ರಂಪ್‌ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್‌ ಅವರು ಬುಧವಾರ ಅಥವಾ ಗುರುವಾರ ಮಾಸ್ಕೊಗೆ ಭೇಟಿ ನೀಡುವ ಸಾಧ್ಯತೆಯಿದೆ. ಯುದ್ಧವನ್ನು ನಿಲ್ಲಿಸುವಂತೆ ಟ್ರಂಪ್‌ ಅವರು ಈ ಹಿಂದೆ ನೀಡಿದ್ದ ಎಚ್ಚರಿಕೆಗೆ ನಿರೀಕ್ಷಿತ ಫಲ ಲಭಿಸಿಲ್ಲ. ಆದ್ದರಿಂದ ಈ ಬಾರಿಯ ಗಡುವು ರಷ್ಯಾದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಕುತೂಹಲ ಮೂಡಿದೆ.

‘ಇಸ್ರೇಲ್‌ ಮತ್ತು ಗಾಜಾ ಭೇಟಿಯ ಬಳಿಕ ವಿಟ್ಕಾಫ್‌ ಅವರು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಅವರನ್ನು ಮಾತುಕತೆಗೆ ಕಳುಹಿಸಿಕೊಡುವಂತೆ ರಷ್ಯಾ ಕೋರಿದೆ. ಏನಾಗಲಿದೆ ಎಂಬುದನ್ನು ಕಾದು ನೋಡೋಣ’ ಎಂದು ಟ್ರಂಪ್‌ ಭಾನುವಾರ ಹೇಳಿದ್ದಾರೆ.

‘ನಮ್ಮ ಅಧಿಕಾರಿಗಳು ಟ್ರಂಪ್‌ ಅವರ ರಾಯಭಾರಿಯನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದಾರೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಸೋಮವಾರ ತಿಳಿಸಿದ್ದಾರೆ. 

‘ವಿಟ್ಕಾಫ್ ಅವರನ್ನು ಮಾಸ್ಕೊದಲ್ಲಿ ನೋಡಲು ನಾವು ಯಾವಾಗಲೂ ಸಂತೋಷ ಪಡುತ್ತೇವೆ. ಅವರೊಂದಿಗೆ ಮಾತುಕತೆ ಅರ್ಥಪೂರ್ಣ ಮತ್ತು ತುಂಬಾ ಉಪಯುಕ್ತವೆಂದು ಭಾವಿಸುತ್ತೇವೆ’ ಎಂದಿದ್ದಾರೆ.

ಇನ್ನಷ್ಟು ನಿರ್ಬಂಧಗಳು ರಷ್ಯಾ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಬಗ್ಗೆ ಟ್ರಂಪ್‌ ಅವರಿಗೆ ಖಚಿತತೆಯಿಲ್ಲ. ‘ನಿರ್ಬಂಧಗಳನ್ನು ಮೀರಿ ನಿಲ್ಲಲು ಸಮರ್ಥ’ ಎಂಬುದನ್ನು ರಷ್ಯಾ ಈ ಹಿಂದೆ ಸಾಬೀತುಪಡಿಸಿದೆ’ ಎಂದು ಟ್ರಂಪ್‌ ಭಾನುವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.