ADVERTISEMENT

ಗ್ರ್ಯಾಮಿ ನಿರೂಪಕನ ವಿರುದ್ಧ ಕಾನೂನು ಕ್ರಮ: ಟ್ರಂ‍ಪ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 15:31 IST
Last Updated 2 ಫೆಬ್ರುವರಿ 2026, 15:31 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದ ನಿರೂಪಕ ಟ್ರಿವರ್‌ ನೋಹ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ನಾನು ಬಿಲ್‌ ಕ್ಲಿಂಟನ್‌ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಎಂದಿಗೂ ಎಪ್‌ಸ್ಟೀನ್‌ ದ್ವೀಪಕ್ಕೆ ಹೋಗಿಲ್ಲ. ನೋಹ್‌ ಹೇಳಿಕೆಯು ಸುಳ್ಳು ಮತ್ತು ಮಾನಹಾನಿಕರ. ಅವರ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮ ಟ್ರೂಥ್‌ನಲ್ಲಿ ಸೋಮವಾರ ತಿಳಿಸಿದ್ದಾರೆ.

‘ಈ ಬಡ, ಕರುಣಾಜನಕ, ಪ್ರತಿಭೆಯಿಲ್ಲದ, ಮಾದಕ ವ್ಯಸನಿಯ ವಿರುದ್ಧ ಮೊಕದ್ದಮೆ ಹೂಡಲು ನಾನು ನನ್ನ ವಕೀಲರನ್ನು ಕಳುಹಿಸುತ್ತೇನೆ. ಸಿದ್ಧರಾಗಿ ನೋಹ್, ನಾನು ನಿಮ್ಮೊಂದಿಗೆ ಸ್ವಲ್ಪ ಮೋಜು ಮಾಡುತ್ತೇನೆ!’ ಎಂದು ಹೇಳಿದ್ದಾರೆ.

ADVERTISEMENT

ಟ್ರಂಪ್‌ ಅವರು ನೋಹ್‌ ಅವರನ್ನು ಟೀಕಿಸುವ ಮೊದಲು, ‘ಗ್ರ್ಯಾಮಿ ಪ್ರಶಸ್ತಿಗಳು ಅತ್ಯಂತ ಕೆಟ್ಟವು. ವೀಕ್ಷಿಸಲು ಅರ್ಹವಾದವಲ್ಲ’ ಎಂದು ಹೇಳಿದ್ದರು.

‘ವೈಲ್ಡ್‌ಫ್ಲವರ್‌’ ಹಾಡಿಗಾಗಿ ‘ಸಾಂಗ್‌ ಆಫ್‌ ದಿ ಇಯರ್‌’ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬಿಲ್ಲಿ ಐಲಿಶ್‌ ಅವರನ್ನು ಅಭಿನಂದಿಸಿದ ನಂತರ ಮಾತನಾಡಿದ್ದ ನೋಹ್‌, ‘ವಾವ್‌. ಟ್ರಂಪ್‌ ಗ್ರೀನ್‌ಲ್ಯಾಂಡ್ ಅನ್ನು ಬಯಸುವಂತೆ ಪ್ರತಿಯೊಬ್ಬ ಕಲಾವಿದ ಬಯಸುವ ಪ್ರಶಸ್ತಿ ಎಂದರೆ ಅದು ಗ್ಯಾಮಿ’ ಎಂದು ಹಾಸ್ಯಮಯವಾಗಿ ಹೇಳಿದ್ದರು.

ಮಾತು ಮುಂದುವರಿಸಿದ್ದ ಅವರು, ‘ಇದು ಸಮಂಜಸವಾಗಿದೆ. ಏಕೆಂದರೆ, ಎಪ್‌ಸ್ಟೀನ್‌ ಹೋದಾಗಿನಿಂದ ಬಿಲ್‌ ಕ್ಲಿಂಟನ್‌ ಜೊತೆ ಕಾಲ ಕಳೆಯಲು ಅವನಿಗೆ ಹೊಸ ದ್ವೀಪದ ಅಗತ್ಯವಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.