
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ
ವಾಷಿಂಗ್ಟನ್: ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿರುವ ಟ್ರಂಪ್, 'ಅಪಾಚೆ ಹೆಲಿಕಾಪ್ಟರ್ ಖರೀದಿಗೆ ಬೇಡಿಕೆ ಇಟ್ಟಿರುವ ಭಾರತ, ಅವನ್ನು ಐದು ವರ್ಷಗಳಿಂದ ಪಡೆದುಕೊಳ್ಳಲು ಆಗಿಲ್ಲ. ಪ್ರಧಾನಿ ಮೋದಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಸರ್, ನಿಮ್ಮನ್ನು ಭೇಟಿಯಾಗಬಹುದೇ ಎಂದು ಕೇಳಿದ್ದರು' ಎಂದಿದ್ದಾರೆ. ಹಾಗೆಯೇ, 'ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾದ ಷಿ ಜಿನ್ ಪಿಂಗ್ ಹೊರತುಪಡಿಸಿ ಜಗತ್ತಿನ ಉಳಿದ ಎಲ್ಲ ನಾಯಕರೂ ನನ್ನನ್ನು ಸರ್ ಎಂದೇ ಸಂಬೋಧಿಸುತ್ತಾರೆ ಎಂದೂ ಹೇಳಿಕೊಂಡಿದ್ದಾರೆ.
'ಭಾರತವು ಸಾಕಷ್ಟು ಸುಂಕ ಪಾವತಿಸಬೇಕಾಗಿರುವುದರಿಂದ ಮೋದಿ ಅಸಮಾಧಾನಗೊಂಡಿದ್ದಾರೆ. ಆದರೆ, ರಷ್ಯಾದೊಂದಿಗೆ ತೈಲ ವ್ಯವಹಾರ ಮಾಡುತ್ತಿರುವ ಕಾರಣದಿಂದಾಗಿ ಅವರ ಮೇಲೆ ಸುಂಕ ಹೇರಿದ್ದೇವೆ' ಎಂದು ಸಮರ್ಥಿಸಿಕೊಂಡಿರುವ ಟ್ರಂಪ್, 'ರಷ್ಯಾದಿಂದ ತೈಲ ಖರೀದಿಸುವುದನ್ನು ಭಾರತ, ಸ್ವಲ್ಪ ಮಟ್ಟಿಗೆ ತಗ್ಗಿಸಿದೆ' ಎಂದು ಪ್ರತಿಪಾದಿಸಿದ್ದಾರೆ.
68 ಅಪಾಚೆ ಖರೀದಿಗೆ ಭಾರತ ಬೇಡಿಕೆ
ಭಾರತದ ಜೊತೆಗಿನ ಮಿಲಿಟರಿ ಒಪ್ಪಂದ, ಅದರಲ್ಲೂ ಮುಖ್ಯವಾಗಿ ಅಪಾಚೆ ಹೆಲಿಕಾಪ್ಟರ್ ಖರೀದಿ ವಿಳಂಬವಾಗುತ್ತಿರುವ ಬಗ್ಗೆ ಅಮೆರಿಕದ ಅಧ್ಯಕ್ಷ ಮಾತನಾಡಿದ್ದಾರೆ. 'ಭಾರತವು ಹಲವು ವರ್ಷಗಳಿಂದ ಕಾಯುತ್ತಿದ್ದು, ಇದೀಗ ಈ ವಿಚಾರ ಪ್ರಗತಿಯಲ್ಲಿದೆ. ಭಾರತವು 68 ಅಪಾಚೆಗಳಿಗೆ ಆರ್ಡರ್ ಮಾಡಿದೆ' ಎಂದು ಹೆಚ್ಚಿನ ವಿವರ ಹಂಚಿಕೊಳ್ಳದೆ ತಿಳಿಸಿದ್ದಾರೆ.
ಸುಂಕ ಏರಿಸುವ ಬೆದರಿಕೆ
ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿತಗೊಳಿಸಬೇಕು ಎಂಬ ಆಗ್ರಹಕ್ಕೆ ಮಣಿಯದಿದ್ದರೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಲಾಗುವುದು ಎಂದು ಟ್ರಂಪ್ ಇತ್ತೀಚೆಗೆ ಬೆದರಿಕೆ ಹಾಕಿದ್ದರು.
ಅಮೆರಿಕ ಅಧ್ಯಕ್ಷರ ವಿಮಾನ ಏರ್‌ಫೋರ್ಸ್ ಒನ್‌ನಲ್ಲಿ ವರದಿಗಾರರ ಜೊತೆ ಮಾತನಾಡಿದ್ದ ಅವರು, 'ಪ್ರಧಾನಿ ಮೋದಿ ಅವರು ಒಳ್ಳೆಯ ಮನುಷ್ಯ. ನಾನು ಸಂತುಷ್ಟಿಯಿಂದ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ ನನ್ನನ್ನು ಸಂತುಷ್ಟಗೊಳಿಸುವುದು ಬಹಳ ಮುಖ್ಯ' ಎಂದಿದ್ದರು.
ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಇತ್ತೀಚೆಗೆ ಶೇ 50ರಷ್ಟು ಸುಂಕ ಹೇರಿದೆ. ಇತರ ದೇಶಗಳ ಮೇಲೆ ಹೇರಿರುವ ಸುಂಕಕ್ಕೆ ಹೋಲಿಸಿದರೆ ಇದು ಅತೀ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.