ADVERTISEMENT

ಇನ್ಮುಂದೆ ಅಮೆರಿಕದಿಂದ ಸೇನಾ ಕಾರ್ಯಾಚರಣೆ ನಿರೀಕ್ಷಿಸಬೇಡಿ: ನೆತನ್ಯಾಹುಗೆ ಟ್ರಂಪ್

ಪಿಟಿಐ
Published 25 ಜೂನ್ 2025, 2:31 IST
Last Updated 25 ಜೂನ್ 2025, 2:31 IST
<div class="paragraphs"><p>ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್</p></div>

ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ದುಬೈ: ಇನ್ನು ಮುಂದೆ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ನಿರೀಕ್ಷಿಸಬೇಡಿ ಎಂದು ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಳಿ ಡೊನಾಲ್ಡ್ ಟ್ರಂಪ್ ಹೇಳಿದ್ದಾಗಿ ಶ್ವೇತ ಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಇರಾನ್‌ನ ಪರಮಾಣು ಘಟಕಗಳ ಮೇಲೆ ಭಾನುವಾರ ಬಾಂಬ್ ದಾಳಿ ನಡೆಸಿದ ಬಳಿಕ ನೆತನ್ಯಾಹು ಜೊತೆ ಮಾತನಾಡಿದ ಟ್ರಂಪ್, ಯುದ್ಧ ನಿಲ್ಲಿಸಿ, ರಾಜತಾಂತ್ರಿಕ ಮಾತುಕತೆಗೆ ಮರಳಬೇಕು ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇರಾನ್‌ನಿಂದ ಎದುರಾಗಬಹುದಿದ್ದ ಯಾವುದೇ ಅಪಾಯವನ್ನು ಅಮೆರಿಕ ತೆಗೆದುಹಾಕಿದೆ ಎಂದು ಟ್ರಂಪ್ ಅವರು ನೆತನ್ಯಾಹು ಜೊತೆ ಹೇಳಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಸೂಕ್ಷ್ಮ ರಾಜತಾಂತ್ರಿಕ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಅಧಿಕಾರವಿಲ್ಲದ ಕಾರಣ, ಹೆಸರನ್ನು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅಧಿಕಾರಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ಈ ಪರಿಸ್ಥಿತಿಯಲ್ಲಿ ಅಮೆರಿಕವು ಹೆಚ್ಚಿನ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಿಲ್ಲ ಎನ್ನುವ ಟ್ರಂಪ್ ಅವರ ನಿಲುವು ನೆತನ್ಯಾಹು ಅವರಿಗೆ ಅರ್ಥವಾಗಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಪರಮಾಣು ಘಟಕಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್–ಇರಾನ್ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಅದರ ಬಳಿಕವೂ ಉಭಯ ದೇಶಗಳ ನಡುವೆ ದಾಳಿ–ಪ್ರತಿದಾಳಿ ನಡೆದಿತ್ತು.

‘ಕದನ ವಿರಾಮ ಜಾರಿಯಲ್ಲಿದೆ, ದಯಮಾಡಿ ಉಲ್ಲಂಘಿಸಬೇಡಿ’ ಎಂದು ಟ್ರಂಪ್ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಾದ ಬಳಿಕದ ಹೇಳಿಕೆಯಲ್ಲಿ ಉಭಯ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.