ಹೂತಿ ಬಂಡುಕೋರರ ಗುರಿಯಾಗಿಸಿ ಅಮೆರಿಕ ವಾಯುದಾಳಿ
ರಾಯಿಟರ್ಸ್
ವೆಸ್ಟ್ ಪಾಮ್ ಬೀಚ್ (ಅಮೆರಿಕ): ಯೆಮೆನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 31 ಜನರು ಮೃತಪಟ್ಟಿದ್ದಾರೆ. ಹತರಾದವರಲ್ಲಿ 18 ಮಂದಿ ನಾಗರಿಕರು ಸೇರಿದ್ದಾರೆ ಎಂದು ಹೌತಿ ಬಂಡುಕೋರರ ಸರ್ಕಾರದ ಆರೋಗ್ಯ ಸಚಿವಾಲಯ ಹೇಳಿದೆ.
ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಹೌತಿಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದೆ.
ಹೌತಿಯ ಭದ್ರಕೋಟೆ ಸಾದಾ, ರಾಜಧಾನಿ ಸನಾದಲ್ಲಿ ಶನಿವಾರ ಸಂಜೆ ಮತ್ತು ಹೊಡೈಡಾ, ಬೈಡಾ ಹಾಗೂ ಮಾರಿಬ್ ಪ್ರಾಂತ್ಯಗಳ ಮೇಲೆ ಭಾನುವಾರ ನಸುಕಿನಲ್ಲಿ ವಾಯುದಾಳಿ ಆಗಿದೆ. ಸುಮಾರು 101 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ವಕ್ತಾರ ಅನೀಸ್ ಅಲ್ ಅಸ್‌ಬಾಹಿ ಭಾನುವಾರ ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಪ್ರಮುಖ ಜಲ ಮಾರ್ಗಗಳಲ್ಲಿ ಹಡಗುಗಳ ಮೇಲಿನ ದಾಳಿಯನ್ನು ಸಂಪೂರ್ಣ ನಿಲ್ಲಿಸುವವರೆಗೂ ಭೀಕರ ವೈಮಾನಿಕ ದಾಳಿ ನಡೆಸಲು ನಿರ್ದೇಶಿಸಲಾಗಿದೆ. ಯೆಮೆನ್‌ನಲ್ಲಿ ಹೌತಿ ಹಿಡಿತದ ಪ್ರದೇಶಗಳ ಮೇಲೆ ಸರಣಿ ವೈಮಾನಿಕ ದಾಳಿಗೂ ಆದೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ನಮ್ಮ ಧೈರ್ಯಶಾಲಿ ಯೋಧರು ಅಮೆರಿಕದ ಹಡಗುಗಳು, ವೈಮಾನಿಕ ಮತ್ತು ನೌಕಾ ಸ್ವತ್ತುಗಳ ರಕ್ಷಣೆಗೆ ಹಾಗೂ ಸಾಗರಯಾನದ ಸ್ವಾತಂತ್ರ್ಯವನ್ನು ಪುನರ್‌ಸ್ಥಾಪಿಸಲು ಭಯೋತ್ಪಾದಕರ ನೆಲೆಗಳು ಮತ್ತು ಅವರ ನಾಯಕರು ಹಾಗೂ ಅವರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದಾರೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವೈಮಾನಿಕ ದಾಳಿಗೆ ಅಮೆರಿಕದ ವಿರುದ್ಧ ಹೌತಿಯು ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಹೌತಿ ಮಾಧ್ಯಮ ಕಚೇರಿಯ ಉಪ ಮುಖ್ಯಸ್ಥ ನಸ್ರುದ್ದೀನ್ ಅಮೀರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.