ವಾಷಿಂಗ್ಟನ್: ಡೆಮಾಕ್ರಟ್ ಪಕ್ಷದ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉದ್ಯಮಿ ಎಲಾನ್ ಮಸ್ಕ್‌ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಎನ್‌ಬಿಸಿ ನ್ಯೂಸ್‌ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ, ಎಲಾನ್ ಮಸ್ಕ್ ನಡೆ ಬಗ್ಗೆ ಟ್ರಂಪ್ ಟೀಕಿಸಿದ್ದಾರೆ.
ಮಸ್ಕ್ ಜೊತೆಗಿನ ಸಂಬಂಧ ಮುಗಿದಿದೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದಾಗ, ‘ಹೌದು... ಹಾಗೆ ಭಾವಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ. ಸರಿಪಡಿಸಿಕೊಳ್ಳುವ ಬಯಕೆ ಇದೆಯೇ ಎಂಬ ಪ್ರಶ್ನೆಗೆ, ‘ಇಲ್ಲ’ ಎಂದಷ್ಟೇ ಹೇಳಿದ್ದಾರೆ.
ಇದೇ ವೇಳೆ, ಸೆನೆಟ್‌ನಲ್ಲಿ ಸುಂಕ ಮತ್ತು ವೆಚ್ಚ ಮಸೂದೆ ಅಂಗೀಕಾರವಾಗುವ ವಿಶ್ವಾಸವಿದೆ ವ್ಯಕ್ತಪಡಿಸಿದ್ದಾರೆ.
ಏನಿದು ಜಟಾಪಟಿ?
ಟ್ರಂಪ್ ಅವರ ಸುಂಕ ಮತ್ತು ವೆಚ್ಚ ಮಸೂದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವ ಎಲಾನ್ ಮಸ್ಕ್, ‘ಸುಂಕ ಮಸೂದೆಯೊಂದು ಆರ್ಥಿಕ ಅಜಾಗರೂಕತೆ ಮತ್ತು ಅತ್ಯಂತ ಅಸಹ್ಯಕರ ಸಂಗತಿ’ ಎಂದು ಟೀಕಿಸಿದ್ದರು. ಇಂತಹ ಮಸೂದೆಯನ್ನು ಬೆಂಬಲಿಸುವ ರಿಪಬ್ಲಿಕನ್ ಪಕ್ಷದ ಪ್ರತಿಯೊಬ್ಬರನ್ನೂ ವಿರೋಧಿಸುವುದಾಗಿ ಹೇಳಿದ್ದರು.
ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿದ್ದ ಟ್ರಂಪ್, ‘ನಮ್ಮ ಬಜೆಟ್‌ನಲ್ಲಿ ಕೊಟ್ಯಂತರ ಡಾಲರ್ ಉಳಿಸುವ ಏಕೈಕ ಮಾರ್ಗವೆಂದರೆ ಇಲಾನ್‌ಗೆ ನೀಡಿರುವ ಸಬ್ಸಿಡಿ ಕಡಿತ ಮತ್ತು ಗುತ್ತಿಗೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸುವುದು’ ಎಂದು ಹೇಳಿದ್ದರು.
ಇದೀಗ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ರಿಪಬ್ಲಿಕನ್ ಪಕ್ಷದ ಬೆಂಬಲಿಗರಲ್ಲಿ ಗೊಂದಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.