ADVERTISEMENT

ಇದೇ ಮೊದಲ ಬಾರಿಗೆ ಮಾಸ್ಕ್‌ ಧರಿಸಿದ ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 12 ಜುಲೈ 2020, 2:26 IST
Last Updated 12 ಜುಲೈ 2020, 2:26 IST
ಫೇಸ್‌ ಮಾಸ್ಕ್‌ ಧರಿಸಿರುವ ಡೊನಾಲ್ಡ್‌ ಟ್ರಂಪ್‌ (ರಾಯಿಟರ್ಸ್‌ ಚಿತ್ರ)
ಫೇಸ್‌ ಮಾಸ್ಕ್‌ ಧರಿಸಿರುವ ಡೊನಾಲ್ಡ್‌ ಟ್ರಂಪ್‌ (ರಾಯಿಟರ್ಸ್‌ ಚಿತ್ರ)   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಫೇಸ್ ಮಾಸ್ಕ್ ಧರಿಸಿದರು.

ಗಾಯಗೊಂಡ ಯೋಧರನ್ನು ಭೇಟಿಯಾಗಲು ಟ್ರಂಪ್ ವಾಷಿಂಗ್ಟನ್‌ನ ಹೊರವಲಯದ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಫೇಸ್‌ ಮಾಸ್ಕ್‌ ಧರಿಸಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರ ಮುದ್ರೆಯನ್ನು ಫೇಸ್‌ಮಾಸ್ಕ್‌ ಮೇಲೆ ಹಾಕಲಾಗಿತ್ತು.

ಕೊರೊನಾ ವೈರಸ್‌ ಅಮೆರಿಕಕ್ಕೆ ಕಾಲಿಟ್ಟ ನಂತರ ಇದೇ ಮೊದಲ ಬಾರಿಗೆ ಅವರು ಫೇಸ್‌ ಮಾಸ್ಕ್‌ ಧರಿಸಿದ್ದಾರೆ. ಅಲ್ಲದೆ, ಫೇಸ್‌ ಮಾಸ್ಕ್‌ ಧರಿಸುವಂತೆಯು, ಈ ಮೂಲಕ ಜನರಲ್ಲಿ ಸಾರ್ವಜನಿಕ ಆರೋಗ್ಯದ ಮಹತ್ವ ಕುರಿತು ಸಂದೇಶ ರವಾನಿಸುವಂತೆಯೂ ಅವರಿಗೆ ಸಾಕಷ್ಟು ಒತ್ತಡ ಇತ್ತು. ಒತ್ತಡಗಳಿದ್ದಾಗ್ಯೂ ಅವರು ಮಾಸ್ಕ್‌ ಧರಿಸಿರಲಿಲ್ಲ. ಈ ಮಧ್ಯೆ ಫೇಸ್‌ ಮಾಸ್ಕ್‌ ಧರಿಸಿರುವ ಅವರ ಮನವೊಲಿಕೆಗೆ ಕಾರಣವಾದ ಸಂಗತಿಯ ಕುರಿತು ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಕಾತರದಿಂದ ಕಾಯುತ್ತಿದ್ದವಾದರೂ, ಟ್ರಂಪ್‌ ಮೊದಲಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೋದರು. ವೈದ್ಯಕೀಯ ತಜ್ಞರು ಶಿಫಾರಸುಗಳ ಹಿನ್ನೆಲೆಯಲ್ಲಿ ಅವರು ಮಾಸ್ಕ್‌ ಧರಿಸಲು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ನಂತರ ವೈಟ್‌ಹೌಸ್‌ನಿಂದ ಹೊರಡುವುದಕ್ಕೂ ಮೊದಲು ಮಾತನಾಡಿದ ಅವರು, ‘ಮಾಸ್ಕ್‌ ಧರಿಸುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ನಾನು ಎಂದಿಗೂ ಮಾಸ್ಕ್‌ ವಿರುದ್ಧ ಇರಲಿಲ್ಲ. ಆದರೆ ಅದಕ್ಕೆ ಸಮಯ ಮತ್ತು ಸ್ಥಳವಿದೆ ಎಂದು ನಾನು ನಂಬುತ್ತೇನೆ’ ಎಂದು ಟ್ರಂಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.