ADVERTISEMENT

ಕಾಬೂಲ್‌ನಿಂದ ಸಹಸ್ರಾರು ಭಯೋತ್ಪಾದಕರೂ ಸ್ಥಳಾಂತರವಾಗಿರಬಹುದು: ಟ್ರಂಪ್‌ ವಾಗ್ದಾಳಿ

ಪಿಟಿಐ
Published 25 ಆಗಸ್ಟ್ 2021, 6:44 IST
Last Updated 25 ಆಗಸ್ಟ್ 2021, 6:44 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಅಫ್ಗನ್‌ ನೀತಿಯ ವಿರುದ್ಧ ವಾಗ್ದಾಳಿ ಮಾಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಅಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಸಾವಿರಾರು ಭಯೋತ್ಪಾದಕರು ಅಫ್ಗನ್‌ನಿಂದ ಹೊರಕ್ಕೆ ಹೋಗಿರಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಬೈಡನ್‌ ಅವರು ಅಫ್ಗಾನಿಸ್ತಾನವನ್ನು ಭಯೋತ್ಪಾದಕರಿಗೆ ಒಪ್ಪಿಸಿದ್ದಾರೆ. ಅಲ್ಲದೆ ನಮ್ಮ ನಾಗರಿಕರಿಗಿಂತ ಮೊದಲು ಸೇನೆಯನ್ನುಕರೆಸಿಕೊಂಡಿದ್ದರಿಂದ ಅಲ್ಲಿ ಸಾವಿರಾರು ಅಮೆರಿಕನ್ನರು ಸಾಯುವ ಸ್ಥಿತಿಗೆ ಬಂದಿದ್ದಾರೆ’ ಎಂದು ಟ್ರಂಪ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಇಲ್ಲಿಯವರೆಗೆ ಸ್ಥಳಾಂತರಿಸಿರುವ 26 ಸಾವಿರ ಜನರಲ್ಲಿ ಕೇವಲ 4 ಸಾವಿರ ಜನರು ಅಮೆರಿಕನ್ನರು’ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ‘ಪೂರ್ಣ ಅಫ್ಗಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನ್‌ಗಳು ಅಮೆರಿಕನ್ನರನ್ನು ಸ್ಥಳಾಂತರಿಸುವ ವಿಮಾನಗಳಿಗೆ ಅನುಮತಿ ನೀಡುವುದಿಲ್ಲ’ ಎಂದಿದ್ದಾರೆ.

ADVERTISEMENT

‘ಸ್ಥಳಾಂತರಿಸುವ ಕಾರ್ಯದಲ್ಲಿ ಅಫ್ಗನ್‌ನಿಂದ ಎಷ್ಟು ಸಾವಿರ ಭಯೋತ್ಪಾದಕರನ್ನು ಏರ್‌ಲಿಫ್ಟ್‌ ಮೂಲಕ ಪ್ರಪಂಚದಾದ್ಯಂತ, ನೆರೆ ಹೊರೆ ದೇಶಗಳಲ್ಲಿ ಇಳಿಸಲಾಗಿದೆಯೋ ಊಹಿಸಲಾಗದು. ಎಂತಹ ಗಂಭೀರ ಲೋಪ ಇದು. ಯಾವುದೇ ಪರಿಶೀಲನೆಯಾಗದೆ ಈ ಕಾರ್ಯ ನಡೆದಿದೆ. ಜೋ ಬೈಡನ್‌ ಅವರು ಎಷ್ಟು ಭಯೋತ್ಪಾದಕರನ್ನು ಅಮೆರಿಕಕ್ಕೆ ಕರೆತಂದಿದ್ದಾರೆಯೊ ಗೊತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ರಿಪಬ್ಲಿಕನ್‌ ಸಂಸದ ಮೈಕ್‌ ವಾಲ್ಟ್ಜ್‌ ಅವರು, ತಾಲಿಬಾನ್‌ ದಾಳಿಯ ವೇಗ ಮತ್ತು ಸ್ವರೂಪದ ಬಗ್ಗೆ ಮಿಲಿಟರಿ, ಗುಪ್ತಚರ ಸಲಹೆಗಾರರ ಸಲಹೆಗಳನ್ನು ಬೈಡನ್‌ ಪಾಲಿಸಿಲ್ಲ ಎಂದು ಖಂಡಿಸಿ, ಜನಪ್ರತಿನಿಧಿಗಳ ಸಭೆಯಲ್ಲಿ (ಹೌಸ್‌ ಆಫ್‌ ರೆಪ್ರೆಡೆಂಟೆಟಿವ್‌) ನಿರ್ಣಯ ಮಂಡಿಸಿದ್ದಾರೆ. ಭಯೋತ್ಪಾದನೆ ನಿಗ್ರಹ, ಅಮೆರಿಕದ ಜನರನ್ನು ಸ್ಥಳಾಂತರಿಸುವ ಯೋಜನೆ ಹಾಗೂ ಅಧ್ಯಕ್ಷರ ನೀತಿಗಳಿಂದಾಗಿ ಅಮೆರಿಕದ ವಿಶ್ವಾಸಾರ್ಹತೆಗೆ ಪೆಟ್ಟಾಗಿದೆ ಎಂದು ಅವರು ದೂರಿದ್ದಾರೆ.

ಬೈಡನ್‌ ಅವರ ಈ ನೀತಿಗಳು ಜಾಗತಿಕ ವೇದಿಕೆಯಲ್ಲಿ ಅಮೆರಿಕವನ್ನು ಮುಜುಗರಕ್ಕೀಡು ಮಾಡಿದೆ. ಅಲ್ಲದೆ ಕೆಟ್ಟ ವಿದೇಶಾಂಗ ನೀತಿಯ ಮೂಲಕ ಪ್ರಮಾದ ಸೃಷ್ಟಿಸಿದ್ದಾರೆ ಎಂದು ವಾಲ್ಟ್ಜ್ ಹೇಳಿದ್ದಾರೆ.

ಈ ನಿರ್ಣಯವನ್ನು ಅಲ್ಪಸಂಖ್ಯಾತ ನಾಯಕರಾದ ಕೆವಿನ್ ಮೆಕಾರ್ಥಿ, ಸ್ಟೀವ್ ಸ್ಕಾಲೈಸ್ ಮತ್ತು ಕಾನ್ಫರೆನ್ಸ್ ಅಧ್ಯಕ್ಷೆ ಎಲಿಸ್ ಸ್ಟೆಫಾನಿಕ್ ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.