ADVERTISEMENT

ಕದನ ವಿರಾಮ ಉಲ್ಲಂಘಿಸಿದ ಸಿರಿಯಾ: ಟರ್ಕಿ ಆರೋಪ

ಏಜೆನ್ಸೀಸ್
Published 19 ಅಕ್ಟೋಬರ್ 2019, 17:31 IST
Last Updated 19 ಅಕ್ಟೋಬರ್ 2019, 17:31 IST
ಉತ್ತರ ಸಿರಿಯಾದ ಗಡಿ ಪ್ರದೇಶದಲ್ಲಿ ಕುರ್ದಿಷ್ ಪಡೆಗಳ ಮೇಲೆ ಟರ್ಕಿ ಮಿಲಿಟರಿ ನಡೆಸುತ್ತಿರುದ ದೌರ್ಜನ್ಯವನ್ನು ವಿರೋಧಿಸಿ ಜೆರುಸಲೇಂನ ಟರ್ಕಿ ರಾಯಭಾರ ಕಚೇರಿ ಎದುರು ಅರಬ್– ಇಸ್ರೇಲ್ ಮೂಲದವರು ಶನಿವಾರ ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ 
ಉತ್ತರ ಸಿರಿಯಾದ ಗಡಿ ಪ್ರದೇಶದಲ್ಲಿ ಕುರ್ದಿಷ್ ಪಡೆಗಳ ಮೇಲೆ ಟರ್ಕಿ ಮಿಲಿಟರಿ ನಡೆಸುತ್ತಿರುದ ದೌರ್ಜನ್ಯವನ್ನು ವಿರೋಧಿಸಿ ಜೆರುಸಲೇಂನ ಟರ್ಕಿ ರಾಯಭಾರ ಕಚೇರಿ ಎದುರು ಅರಬ್– ಇಸ್ರೇಲ್ ಮೂಲದವರು ಶನಿವಾರ ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ    

ಇಸ್ತಾನ್‌ಬುಲ್: ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಸಿರಿಯಾದ ಕುರ್ದಿಷ್ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಶನಿವಾರ ಟರ್ಕಿ ಆರೋಪಿಸಿದೆ.

‘ಕದನ ವಿರಾಮವನ್ನು ಉಲ್ಲಂಘಿಸಿರುವ ಪಡೆಗಳು 36 ಗಂಟೆಗಳ ಅವಧಿಯಲ್ಲಿ ಒಟ್ಟು 14 ದಾಳಿಗಳು ನಡೆಸಿವೆ. ಇದರಲ್ಲಿ 12 ದಾಳಿಗಳು ಈಶಾನ್ಯ ಸಿರಿಯಾದ ಗಡಿ ಪಟ್ಟಣ ರಾಸ್–ಅಲ್–ಐನ್‌ ಕಡೆಯಿಂದ ನಡೆದಿವೆ. ದಾಳಿಯಲ್ಲಿ ರಾಕೆಟ್‌ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ’ ಎಂದು ಟರ್ಕಿ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕದನ ವಿರಾಮಕ್ಕೆ ಸಂಬಂಧಿಸಿದಂತೆ ಗುರುವಾರವಷ್ಟೇ ಅಮೆರಿಕದ ಜತೆ ಟರ್ಕಿ ಮಹತ್ವದ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು. ಕದನ ವಿರಾಮ ಒಪ್ಪಂದದ ಪ್ರಕಾರ, ಸಿರಿಯಾದ ಕುರ್ದಿಷ್ ಪಡೆಗಳು ಗಡಿಪ್ರದೇಶದಿಂದ 32 ಕಿ.ಮೀ. ದೂರ ಸರಿಯಬೇಕು. ಆಗ ಈ ಪ್ರದೇಶವು ಸುರಕ್ಷತಾ ಪ್ರದೇಶವಾಗುತ್ತದೆ ಎನ್ನುವುದಾಗಿತ್ತು.

ADVERTISEMENT

ಉತ್ತರ ಸಿರಿಯಾದ ಮೇಲೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಐದು ದಿನಗಳ ಕಾಲ ನಿಲ್ಲಿಸಲು ಟರ್ಕಿ ಒಪ್ಪಿಕೊಂಡಿತ್ತು. ಅಲ್ಲದೇ ಗಡಿಯುದ್ದಕ್ಕೂ ಇರುವ ಕುರ್ದಿಷ್ ಪಡೆಗಳು ಸುರಕ್ಷತಾ ವಲಯದಿಂದ ಹಿಂದೆ ಸರಿದರೆ ಸೇನಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿಯೂ ಟರ್ಕಿ ಹೇಳಿತ್ತು. ಒಂದು ವೇಳೆ ಕುರ್ದಿಷ್ ಪಡೆಗಳು ಹಿಂದೆ ಸರಿಯದಿದ್ದರೆ ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸುವುದಾಗಿ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೊಗನ್ ಎಚ್ಚರಿಕೆ ನೀಡಿದ್ದರು.

ಗುರುವಾರ ಅತ್ತ ಟರ್ಕಿ ಕದನ ವಿರಾಮ ಘೋಷಿಸುತ್ತಿದ್ದಂತೆಯೇ ಇತ್ತ ಗಡಿ ಪ್ರದೇಶದಲ್ಲಿ ಕುರ್ದಿಷ್ ಪಡೆಗಳು ದಾಳಿ ನಡೆಸಿವೆ ಎಂದು ಟರ್ಕಿ ಆರೋಪಿಸಿದೆ.

ಟರ್ಕಿ ವಿರುದ್ಧ ಸಿರಿಯಾ ಪ್ರತ್ಯಾರೋಪ
ಬೈರೂತ್‌ (ಎಪಿ): ಈಶಾನ್ಯ ಸಿರಿಯಾದಲ್ಲಿ ಟರ್ಕಿ, ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಿರಿಯಾದ ಕುರ್ದಿಷ್ ಪಡೆಗಳು ಟರ್ಕಿ ವಿರುದ್ಧ ಪ್ರತ್ಯಾರೋಪ ಮಾಡಿವೆ.

ಟರ್ಕಿಯು ಅಮೆರಿಕದ ಜೊತೆಗೂಡಿ ಕದನ ವಿರಾಮ ಒಪ್ಪಂದ ಘೋಷಿಸಿ 30 ಗಂಟೆಗಳ ನಂತರದಲ್ಲೇ ಕದನ ವಿರಾಮ ಉಲ್ಲಂಘನೆಯಾಗಿದ್ದು, ಈಶಾನ್ಯ ಸಿರಿಯಾದ ಗಡಿ ಪಟ್ಟಣದ ಮೇಲೆ ಹೇರಿರುವ ಮುತ್ತಿಗೆಯನ್ನು ತೆಗೆದುಹಾಕಲು ನಿರಾಕರಿಸಿದೆ ಎಂದು ಸಿರಿಯಾ ದೂರಿದೆ.

ಟರ್ಕಿ–ಸಿರಿಯಾ ಗಡಿ ಪ್ರದೇಶದಲ್ಲಿ ಐದು ದಿನಗಳ ಕಾಲ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದ ಟರ್ಕಿ ಅಧ್ಯಕ್ಷ ರಿಸೆಪ್ ಅವರೊಂದಿಗೆ ಅಮೆರಿಕ ಮಾತುಕತೆ ನಡೆಸಿತ್ತು. ಇದರ ಬೆನ್ನಲ್ಲೇ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಸಿರಿಯಾದ ಡೆಮಾಕ್ರಟಿಕ್ ಪಡೆ ಶನಿವಾರ ಮಾತುಕತೆಗೆ ಕರೆದಿದೆ.

ಗಡಿ ಪ್ರದೇಶರಾಸ್ ಅಲ್–ಐನ್‌ನಲ್ಲಿ ಶುಕ್ರವಾರ ಕದನ ವಿರಾಮ ಒಪ್ಪಂದಕ್ಕೆ ವಿರುದ್ಧವಾಗಿ ಕಲ್ಲಿನ ದಾಳಿ ಮತ್ತು ಶೆಲ್ ದಾಳಿಗಳು ನಡೆದಿವೆ. ಗಡಿ ಪ್ರದೇಶದಿಂದ ವಾಪಸ್ ಹೋಗುವಂತೆ ಟರ್ಕಿಷ್‌ ಪಡೆಗಳು ಕುರ್ದಿಷ್ ಪಡೆಗಳನ್ನು ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.