ADVERTISEMENT

ಪಾಕಿಸ್ತಾನ: ಟಿಟಿಪಿ, ಅಲ್-ಖೈದಾ ಸಂಘಟನೆಗೆ ಸೇರಿದ 26 ಭಯೋತ್ಪಾದಕರ ಬಂಧನ

ಪಿಟಿಐ
Published 14 ಫೆಬ್ರುವರಿ 2026, 13:57 IST
Last Updated 14 ಫೆಬ್ರುವರಿ 2026, 13:57 IST
   

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಾದ್ಯಂತ ವಿವಿಧ ಭಾಗಗಳಲ್ಲಿ ಪ್ರಮುಖ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಿದ್ದ ನಿಷೇಧಿತ ಟಿಟಿಪಿ ಮತ್ತು ಅಲ್-ಖೈದಾ ಸಂಘಟನೆಗೆ ಸೇರಿದ ಕನಿಷ್ಠ 26 ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಕಾನೂನು ಜಾರಿ ಸಂಸ್ಥೆಗಳು ಶನಿವಾರ ತಿಳಿಸಿವೆ.

ಕಳೆದ ಒಂದು ತಿಂಗಳಿನಿಂದ, ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಗುಪ್ತಚರ ಆಧಾರಿತ 286 ಕಾರ್ಯಾಚರಣೆಗಳನ್ನು ನಡೆಸಿದ್ದು, 286 ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಒಟ್ಟು 26 ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಇತರ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕರ ಬಳಿಯಿಂದ 4,935 ಗ್ರಾಂ ಸ್ಫೋಟಕಗಳು, 19 ಡಿಟೋನೇಟರ್‌ಗಳು, 34 ಅಡಿ ಸೇಫ್ಟಿ ಫ್ಯೂಸ್ ವೈರ್, ಮೂರು ಇಐಡಿ ಬಾಂಬ್‌ಗಳು ಮತ್ತು ನಿಷೇಧಿತ ಸಂಘಟನೆಗಳಿಗೆ ಸಂಬಂಧಿಸಿದ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಭಯೋತ್ಪಾದಕರು, ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿರುವ ಪ್ರಮುಖ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಯೋಜಿಸಿದ್ದರು. ಲಾಹೋರ್, ಸರ್ಗೋಧಾ, ಸಾಹಿವಾಲ್, ಖುಶಬ್, ಮಿಯಾನ್‌ವಾಲಿ, ಭಕ್ಕರ್, ಫೈಸಲಾಬಾದ್, ಜಾಂಗ್, ಚಕ್ವಾಲ್, ರಾಜನ್‌ಪುರ್, ನರೋವಾಲ್ ಮತ್ತು ಪಾಕ್‌ಪಟ್ಟನ್‌ನಲ್ಲಿ ಇವರನ್ನು ಬಂಧಿಸಲಾಗಿದೆ. ಅವರ ವಿರುದ್ಧ 25 ಪ್ರಕರಣಗಳು ದಾಖಲಾಗಿವೆ ಎಂದು ಸಿಟಿಡಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.