ADVERTISEMENT

ಅಮೆರಿಕ ಸೇನೆ ಕೊರೊನಾ ತಂದಿತೆಂಬ ಟ್ವೀಟ್‌ ಫ್ಯಾಕ್ಟ್‌ಚೆಕ್‌ ಮಾಡಿದ ಟ್ವಿಟರ್‌

ರಾಯಿಟರ್ಸ್
Published 29 ಮೇ 2020, 4:33 IST
Last Updated 29 ಮೇ 2020, 4:33 IST
ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಚೀನಾ ಸರ್ಕಾರದ ವಕ್ತಾರ ಮಾಡಿದ್ದ ಟ್ವೀಟ್‌
ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಚೀನಾ ಸರ್ಕಾರದ ವಕ್ತಾರ ಮಾಡಿದ್ದ ಟ್ವೀಟ್‌    

ಶಾಂಘೈ: ಅಮೆರಿಕದ ಸೇನೆ ಚೀನಾಕ್ಕೆ ಕೊರೊನಾ ವೈರಸ್‌ ಅನ್ನು ತಂದಿದೆ ಎಂದು ಚೀನಾ ಸರ್ಕಾರದ ವಕ್ತಾರ ಮಾರ್ಚ್‌ನಲ್ಲಿ ಮಾಡಿದ್ದ ಟ್ವೀಟ್‌ ಅನ್ನು ಟ್ವಿಟರ್‌ ಗುರವಾರ ಫ್ಯಾಕ್ಟ್‌ ಚೆಕ್‌ ಮಾಡಿದೆ.

ಇ ಅಂಚೆ ಮತದಾನದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದ ಟ್ವೀಟ್‌ ಅನ್ನು ಫ್ಯಾಕ್ಟ್‌ ಚೆಕ್‌ ಮಾಡಿದ್ದ ಟ್ವಿಟರ್‌ಗೆ ಟ್ರಂಪ್‌ ನಿಷೇಧದ ಎಚ್ಚರಿಕೆ ನೀಡಿದ್ದರು. ಇದಾದ ಬೆನ್ನಿಗೇ ಟ್ವಿಟರ್‌ ಹಲವು ಟ್ವೀಟ್‌ಗಳನ್ನು ಫ್ಯಾಕ್ಟ್‌ಚೆಕ್‌ ಮಾಡಿದೆ.

ADVERTISEMENT

‘ಅಮೆರಿಕದಲ್ಲಿ ಕೆಲವರು ಜ್ವರ ಬಾಧಿತರಾಗಿದ್ದಾರೆ ಎಂದು ತಪ್ಪಾಗಿ ರೋಗ ನಿರ್ಣಯ ಮಾಡಲಾಗಿದೆ. ಅವರಿಗೆ ಕೋವಿಡ್‌ –19 ಬಾಧಿಸಿರಬಹುದು’ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಡ್‌ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಚೀನಾ ಸರ್ಕಾರದ ವಕ್ತಾರ ಲಿಜಿಯಾನ್‌ ಮಾರ್ಚ್‌ 12ರಂದು ಟ್ವೀಟ್‌ ಮಾಡಿದ್ದರು.

‘ವುಹಾನ್‌ಗೆ ಸಾಂಕ್ರಾಮಿಕ ರೋಗವನ್ನು ಅಮೆರಿಕ ಸೈನ್ಯ ತಂದಿರಬಹುದು. ನೀವು ಪಾರದರ್ಶಕವಾಗಿರಿ! ನಿಮ್ಮ ದತ್ತಾಂಶಗಳನ್ನು ಬಹಿರಂಗಗೊಳಿಸಿ. ಅಮೆರಿಕ ನಮಗೆ ವಿವರಣೆಗಳನ್ನು ನೀಡಬೇಕಿದೆ,’ ಎಂದು ಲಿಜಿಯಾನ್‌ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು. ಈ ಟ್ವೀಟ್‌ನ ಅಡಿಯಲ್ಲಿ ಟ್ವಿಟರ್‌ ಸಂಸ್ಥೆ ಗುರುವಾರ ಫ್ಯಾಕ್ಟ್‌ಚೆಕ್‌ನ ಲಿಂಕ್‌ ಹಾಕಿದೆ.

ವೈರಸ್‌ ಪ್ರಾಣಿಜನ್ಯ ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಲಿಂಕ್‌ ಕ್ಲಿಕ್‌ ಮಾಡುತ್ತಲೇ ತೆರೆದುಕೊಳ್ಳುತ್ತಿದೆ.

‘ಲಭ್ಯವಿರುವ ಎಲ್ಲಾ ಪುರಾವೆಗಳು ಕೊರೊನಾ ವೈರಸ್ ಪ್ರಾಣಿ ಮೂಲವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತಿದೆ. ಅಲ್ಲದೆ, ಇದನ್ನು ಪ್ರಯೋಗಾಲಯದಲ್ಲಿ ಅಥವಾ ಬೇರೆಲ್ಲಿಯೂ ಸೃಷ್ಟಿ ಮಾಡಲಾಗಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ವಕ್ತಾರ ಫಡೆಲಾ ಚೈಬ್ ಜಿನೀವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿರುವುದನ್ನು ಟ್ವಿಟರ್‌ ಈ ಫ್ಯಾಕ್ಟ್‌ ಚೆಕ್‌ನಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.