ವಿಶ್ವಸಂಸ್ಥೆ(ಪಿಟಿಐ): ಏಡ್ಸ್‌ಗೆ ಚಿಕಿತ್ಸೆ ನೀಡುವ ಔಷಧಿಯನ್ನು ಈಗ ಭಾರತವೇ ಬಹುಪಾಲು ಪೂರೈಸುತ್ತಿದೆ.
ಆ್ಯಂಟಿ ರಿಟ್ರೊವೈರಲ್ ಔಷಧಿಯನ್ನು ಜಗತ್ತಿನ ಒಟ್ಟು ಮೂರನೇ ಎರಡರಷ್ಟು ಭಾರತವೇ ಪೂರೈಸುವ ಮೂಲಕ ಏಡ್ಸ್ ನಿಯಂತ್ರಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
‘ಭಾರತದ ಫಾರ್ಮಾಸುಟಿಕಲ್ ಉದ್ಯಮವು ಜಾಗತಿಕವಾಗಿ ಉಪಯೋಗಿಸುವ ಆ್ಯಂಟಿ ರಿಟ್ರೊವೈರಲ್ ಔಷಧಿಯನ್ನು ಅಪಾರ ಪ್ರಮಾಣದಲ್ಲಿ ಪೂರೈಸುತ್ತಿದೆ. ಇದರಿಂದ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುತ್ತಿದೆ. ಈ ಮೂಲಕ ಎಚ್‌ಐವಿ ನಿಯಂತ್ರಿಸುವ ವಿಷಯದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಇಲ್ಲಿ ನಡೆದ ಸಾಮಾನ್ಯ ಅಧಿವೇಶನದಲ್ಲಿ ತಿಳಿಸಿದ್ದಾರೆ.
‘ಆದರೆ, 2030ರ ವೇಳೆಗೆ ಏಚ್‌ಐವಿ ನಿರ್ಮೂಲನೆ ಮಾಡುವ ಗುರಿ ಸಾಧಿಸಲು ತೊಡಕುಗಳಿವೆ. 1995ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಚ್‌ಐವಿ ರೋಗಿಗಳಿದ್ದರು. ಈಗ ರೋಗಿಗಳ ಸಂಖ್ಯೆ ಶೇಕಡ 80ರಷ್ಟು ಕಡಿಮೆಯಾಗಿದೆ. ಜತೆಗೆ ಈ ಕಾಯಿಲೆಯಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಕ್ಷಯ ರೋಗದಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ಶೇಕಡ 84ರಷ್ಟು ಇಳಿಮುಖವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.