ADVERTISEMENT

‘ಭಾರತದಲ್ಲಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ’: ಬ್ರಿಟನ್ ಮೇಲ್ಮನೆಯಲ್ಲಿ ಚರ್ಚೆ

ಪಿಟಿಐ
Published 16 ಮಾರ್ಚ್ 2021, 14:45 IST
Last Updated 16 ಮಾರ್ಚ್ 2021, 14:45 IST
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್   

ಲಂಡನ್: ‘ಭಾರತದಲ್ಲಿರುವ ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಗುಂಪುಗಳ ಸ್ವಾತಂತ್ರ್ಯ’ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕೆಂದು ಬ್ರಿಟನ್ ಸಂಸತ್ ಸದಸ್ಯರು ಸಲಹೆ ನೀಡಿದ್ದಾರೆ.

ಬ್ರಿಟನ್‌ ಸಂಸತ್ತಿನ ಮೇಲ್ಮನೆಯಲ್ಲಿ ಸೋಮವಾರ ‘ಭಾರತ: ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು’ ವಿಷಯ ಕುರಿತು ಚರ್ಚೆ ನಡೆಯಿತು.

ಚರ್ಚೆಯಲ್ಲಿ ಎಂಟು ಪಕ್ಷಗಳ ಸದಸ್ಯರು, ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾವನ್ನು ಮುಚ್ಚಿರುವುದು ಮತ್ತು ಅದರ ಅಕೌಂಟ್ ಅನ್ನು ಸ್ಥಗಿತಗೊಳಿಸಿರುವುದು, ಕಾಶ್ಮೀರದಲ್ಲಿನ ಪರಿಸ್ಥಿತಿ, ಪತ್ರಕರ್ತರ ಬಂಧನ, ಹಿಂದೂಯೇತರ ಅಲ್ಪಸಂಖ್ಯಾತರು, ದಲಿತ ಕಾರ್ಯಕರ್ತರ ಪರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಆಂದೋಲನ ನಡೆಸುತ್ತಿರುವವ ಎನ್‌ಜಿಒಗಳಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಕುರಿತು ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತದೊಂದಿಗೆ ಚರ್ಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಪರಸ್ಪರ ವಿಶ್ವಾಸ ಮತ್ತು ನಂಬಿಕೆಯೊಂದಿಗೆ ಭಾರತದೊಂದಿಗೆ ಬಲವಾದ ಸಂಬಂಧ ವೃದ್ಧಿಯಾಗಿದೆ. ಭಾರತದ ಉತ್ತಮ ಸ್ನೇಹಿತನಾಗಿ ಬ್ರಿಟನ್ ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ವಿಶ್ವಾಸದಿಂದ ನಡೆದುಕೊಳ್ಳಬೇಕಿದೆ. ಅಂದರೆ, ಪ್ರಜಾಪ್ರಭುತ್ವದಲ್ಲಿ ಮುಕ್ತ ನಾಗರಿಕ ಸಮಾಜದ ಮಹತ್ವವನ್ನು ಒತ್ತಿ ಹೇಳಬೇಕಿದೆ ಎಂದರ್ಥ’ ಎಂದು ಪ್ರತಿಪಕ್ಷ ಲೇಬರ್ ಪಕ್ಷದ ಸದಸ್ಯ ರಾಯ್ ಕಾಲಿನ್ಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದೇ‌ಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ (ಎಫ್‌ಸಿಡಿಒ) ಸಚಿವ ಗೋಲ್ಡ್ ಸ್ಮಿತ್ ಅವರು, ಬ್ರಿಟನ್ ಮತ್ತು ಭಾರತದ ನಡುವಿನ ನಿಕಟ ಸಂಬಂಧವನ್ನು ಎತ್ತಿಹಿಡಿಯಲು ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದರು.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದೊಂದಿಗೆ ಬ್ರಿಟನ್ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಭಾಗಿತ್ವ ಹೊಂದಿದೆ. ಅಲ್ಲದೇ, ರಕ್ಷಣಾ ಮತ್ತು ಸುರಕ್ಷತೆಯ ವಿಚಾರದಲ್ಲೂ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯವಿದೆ. ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಬ್ರಿಟನ್ ಪೂರ್ಣಪ್ರಮಾಣದಲ್ಲಿ ಭಾರತದೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಲಿದೆ’ ಎಂದು ಗೋಲ್ಡ್ ಸ್ಮಿತ್ ವಿವರಿಸಿದರು.

‘ಬ್ರಿಟನ್ ಪ್ರಧಾನಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಸರ್ಕಾರದೊಂದಿಗೆ ದ್ವಿಪಕ್ಷೀಯ ಮಾತುಕತೆಯ ಜೊತೆಗೆ ಬಹುಪಕ್ಷೀಯ ಸಮಸ್ಯೆಗಳನ್ನೂ ಚರ್ಚಿಸಲು ಇದೊಂದು ಉತ್ತಮ ಅವಕಾಶ. ಮೇಲ್ಮನೆಯಲ್ಲಿ ಸದಸ್ಯರು ಎತ್ತಿರುವ ನಿರ್ದಿಷ್ಟ ಕಾಳಜಿಯ ವಿಷಯಗಳ ಕುರಿತು ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಭಾರತದ ಪ್ರಧಾನಿ ಮೋದಿ ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಲಿದ್ದಾರೆ’ ಎಂದರು.

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಹೌಸ್ ಆಫ್ ಕಾಮನ್ಸ್ ಸಮಿತಿಯು ವಾರದ ಹಿಂದೆಯಷ್ಟೇ ಚರ್ಚೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.