ADVERTISEMENT

ನನ್ನ ಸಾವು ಘೋಷಿಸಲು ವೈದ್ಯರಿಂದ ಸಿದ್ಧತೆ ಆಗಿತ್ತು: ಬ್ರಿಟನ್‌ ಪ್ರಧಾನಿ ಜಾನ್ಸನ್‌

ಏಜೆನ್ಸೀಸ್
Published 3 ಮೇ 2020, 4:00 IST
Last Updated 3 ಮೇ 2020, 4:00 IST
   

ಲಂಡನ್‌: ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ‘ಕಾಯಿಲೆಯನ್ನು ಎದುರಿಸಿದ ಸನ್ನಿವೇಶ ಕಠಿಣ ಕ್ಷಣಗಳಾಗಿದ್ದವು,’ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ‘ತಮಗೆ ಬರಬಹುದಾದ ಸಾವಿನ ಸಂಗತಿಯನ್ನು ಘೋಷಣೆ ಮಾಡಲು ವೈದ್ಯರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು,’ ಎಂದು ಹೇಳಿದ್ದಾರೆ.

ಬ್ರಿಟನ್‌ನ ‘ದಿ ಸನ್‌’ ಪತ್ರಿಕೆಗೆ ಭಾನುವಾರ ಸಂದರ್ಶನ ನೀಡಿರುವ ಅವರು, ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು, ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದ ವಿಷಯವನ್ನುಹಂಚಿಕೊಂಡಿದ್ದಾರೆ.

‘ಅದು ಕಠಿಣ ಕ್ಷಣಗಳಾಗಿದ್ದವು. ನಾನು ಅದನ್ನು ನಿರಾಕರಿಸುವುದಿಲ್ಲ. ಸ್ಟಾಲಿನ್-ಮಾದರಿಯ ಸಾವಿನ ಸನ್ನಿವೇಶನವನ್ನು ನಿಭಾಯಿಸಲು ವೈದ್ಯರು ತಯಾರಿ ಮಾಡಿಕೊಂಡಿದ್ದರು. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಾನು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಸಾವಿನ ಘೋಷಣೆ ಮಾಡಲು ದಿಢೀರ್‌ ವ್ಯವಸ್ಥೆಗಳು ನಡೆಯುತ್ತಿವೆ ಎಂಬುದು ನನಗೆ ಗೊತ್ತಿತ್ತು,’ ಎಂದು ಬೋರಿಸ್‌ ಜಾನ್ಸನ್‌ ಸಂದರ್ಶನದಲ್ಲಿ ವಿವರಿಸಿದ್ದಾರೆ.

ADVERTISEMENT

‘ಈ ಕಾಯಿಲೆಯಿಂದ ಪಾರಾಗುವುದು ಹೇಗೆ ಎಂದು ಸದಾ ಚಿಂತಿಸುತ್ತಿದ್ದ ನಾನು, ಸಾಯುತ್ತೇನೆ ಎಂದು ಮಾತ್ರ ಯೋಚನೆ ಮಾಡಲಿಲ್ಲ. ಆಸ್ಪತ್ರೆಯಲ್ಲಿ ನನಗೆ ಲೀಟರ್‌ಗಟ್ಟಲೆ ಆಕ್ಸಿಜನ್‌ ಪೂರೈಕೆ ಮಾಡಲಾಗಿದೆ. ಕಾಯಿಲೆ ಭಾದಿಸುತ್ತಿದ್ದಾಗ ನಾನು ನಿರಾಶೆಗೊಂಡಿದ್ದೆ. ನನ್ನನ್ನು ಐಸಿಯುಗೆ ಸ್ಥಳಾಂತರಿಸಿ, ಆಕ್ಸಿಜನ್‌ ವ್ಯವಸ್ಥೆಯಲ್ಲಿಡಬೇಕೆ ಬೇಡವೇ ಎಂದು ವೈದ್ಯರು ಸಮಾಲೋಚನೆ ಮಾಡುತ್ತಿದ್ದಾಗ ನನಗೆ ವಾಸ್ತವದ ಅರಿವುಂಟಾಯಿತು. ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ ಎಂದಾಗ, ವೈದ್ಯರು ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದರು,’ ಎಂದೂ ಅವರು ಹೇಳಿದ್ದಾರೆ.

‘ಆರಂಭದಲ್ಲಿ ನಾನು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದೆ. ಆದರೆ, ನನ್ನಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ವೈದ್ಯರು ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂದು ನನಗೆ ಒತ್ತಾಯಿಸಿದರು. ಅಂದು ಅವರು ಕೈಗೊಂಡ ನಿರ್ಧಾರ ಸರಿ ಇತ್ತು ಎಂದು ನನಗೆ ಈಗ ಅರ್ಥವಾಗುತ್ತಿದೆ,’ ಎಂದು ಜಾನ್ಸನ್‌ ಹೇಳಿದ್ದಾರೆ.

‘ತಮಗೆ ಕೋವಿಡ್‌ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅದರಿಂದ ಗುಣಮಖರಾಗಿದ್ದನ್ನು ಮರೆಯಲಾಗದ ಘಟನೆ,’ ಎಂದು ಹೇಳಿಕೊಂಡಿರುವ ಜಾನ್ಸನ್‌ ‘ದಿ‌ ಸನ್‌’ ಪತ್ರಿಕೆಯ ಸಂದರ್ಶನದಲ್ಲಿ ಭಾವುಕರಾಗಿದ್ದಾರೆ.

55ರ ಹರೆಯದ ಜಾನ್ಸನ್ ಅವರು ಕೋವಿಡ್‌ಗೆ ತುತ್ತಾಗಿದ್ದಾರೆಂದು ಮಾರ್ಚ್ 27 ರಂದು ಮೊದಲು ಘೋಷಿಸಲಾಯಿತು. ಆದರೆ ಅವರಿಗೆ ಕಡಿಮೆ ಪ್ರಮಾಣದ ಲಕ್ಷಣಗಳಿವೆ ಎಂದು ಹೇಳಲಾಗಿತ್ತು. ಒಂದು ವಾರ ಕಾಲ ಅವರು ಪ್ರತ್ಯೇಕ ವಾಸದಲ್ಲಿದ್ದರೂ,

ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಅವರನ್ನು ಏ. 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಒಂದೇ ದಿನಕ್ಕೆ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು.

ಮೂರು ದಿನಗಳ ಕಾಲ ಆಕ್ಸಿಜನ್‌ ವ್ಯವಸ್ಥೆಯಲ್ಲಿದ್ದ ಅವರು ಏ. 12ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

ಜಾನ್ಸನ್‌ ಕಳೆದ ಸೋಮವಾರವಷ್ಟೇ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಮಧ್ಯೆ ಅವರ ಗೆಳತಿ ಕ್ಯಾರಿ ಸೈಮಂಡ್ಸ್ ಅವರು ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಜಾನ್ಸನ್‌ ತಂದೆಯಾದ ಸಂಭ್ರಮದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.