ADVERTISEMENT

ಭಾರತ–ಚೀನಾ ನಡುವಿನ ವಿವಾದವು ಗಂಭೀರ, ಕಳವಳಕಾರಿ: ಬ್ರಿಟನ್‌ ಪ್ರಧಾನಿ

ಪಿಟಿಐ
Published 25 ಜೂನ್ 2020, 12:32 IST
Last Updated 25 ಜೂನ್ 2020, 12:32 IST
ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌
ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌    

ಲಂಡನ್‌:ಪೂರ್ವ ಲಡಾಖ್‌ನಲ್ಲಿನ ಬೆಳವಣಿಗೆಗಳ ಮೇಲೆ ಗಮನವಿಟ್ಟಿರುವುದಾಗಿ ಹೇಳಿಕೊಂಡಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಇದು ‘ಅತ್ಯಂತ ಗಂಭೀರ ಮತ್ತು ಆತಂಕಕಾರಿ ಪರಿಸ್ಥಿತಿ’ ಎಂದು ಹೇಳಿದ್ದಾರೆ. ಅಲ್ಲದೆ, ಗಡಿಗೆ ಸಂಬಂಧಿಸಿದ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಭಾರತ ಮತ್ತು ಚೀನಾಕ್ಕೆ ಸಲಹೆ ನೀಡಿದ್ದಾರೆ.

ಜಾನ್ಸನ್‌ ಅವರ ಮೊದಲ ಅಧಿಕೃತ ಹೇಳಿಕೆಯು ಬುಧವಾರ ಇಲ್ಲಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ನಡೆದ ಪ್ರಧಾನ ಮಂತ್ರಿಗಳ ವಾರದ ಪ್ರಶ್ನಾವಳಿಗಳ ಅವಧಿಯಲ್ಲಿ ವ್ಯಕ್ತವಾಗಿದೆ.

ADVERTISEMENT

‘ಒಂದು ಕಡೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಕಾಮನ್‌ವೆಲ್ತ್‌ ಸದಸ್ಯ ರಾಷ್ಟ್ರ, ಮತ್ತೊಂದುಕಡೆ ನಮ್ಮ ಪ್ರಜಾಪ್ರಭುತ್ವದ ಪರಿಕಲ್ಪನೆಗಳನ್ನು ಪ್ರಶ್ನೆ ಮಾಡುವ ದೇಶ. ಈ ಎರಡೂ ದೇಶಗಳ ನಡುವಿನ ವಿವಾದದಲ್ಲಿ ಬ್ರಿಟಿಷ್ ಹಿತಾಸಕ್ತಿಗಳ ಮೇಲಾಗುವ ಪರಿಣಾಮಗಳೇನು,’ ಎಂಬುದರ ಕುರಿತು ಕನ್ಸರ್ವೇಟಿವ್ ಪಕ್ಷದ ಸಂಸದ ಫ್ಲಿಕ್ ಡ್ರಮ್ಮೊಂಡ್‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಬೋರಸ್‌ ಜಾನ್ಸನ್‌, ‘ಪೂರ್ವ ಲಡಾಖ್‌ನ ಸದ್ಯದ ಪರಿಸ್ಥಿತಿಯು ಅತ್ಯಂತ ಗಂಭೀರ ಮತ್ತು ಚಿಂತಾಜನಕವಾಗಿವೆ. ಬ್ರಿಟನ್‌ ಇದನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸುತ್ತಿದೆ,’ ಎಂದು ತಿಳಿಸಿದ್ದಾರೆ.

‘ಗಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎರಡೂ ರಾಷ್ಟ್ರಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಮಾಡಲು ಇಬ್ಬರನ್ನೂ ಪ್ರೋತ್ಸಾಹಿಸುವುದೇ ನಾವು ಮಾಡಬಹುದಾದ ಅತ್ಯುತ್ತಮ ಕೆಲಸ,’ ಎಂದೂ ಜಾನ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ಪೂರ್ವ ಲಡಾಖ್‌ನ ಗಡಿಯಿಂದ ಸೈನ್ಯಗಳನ್ನು ಹಿಂದಕ್ಕೆ ಕರೆಸಿಕೊಳ್ಳವ ಬಗ್ಗೆ ಈ ಹಿಂದೆ ಎರಡೂ ರಾಷ್ಟ್ರಗಳ ನಡುವೆ ಆಗಿದ್ದ ಒಪ್ಪಂದನ್ನು ಅನುಷ್ಠಾನಕ್ಕೆ ತರುವುದೇ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಸ್ಥಾಪಿಸಲು ಇರುವ ಮಾರ್ಗ. ಇದನ್ನು ಎರಡೂ ದೇಶಗಳೂ ಒಪ್ಪಿಕೊಂಡಿವೆ,’ ಎಂದು ಭಾರತೀಯ ವಿದೇಶಾಂಗ ಇಲಾಖೆಯು ನವದೆಹಲಿಯಲ್ಲಿ ಇದೇ ಬುಧವಾರ ಹೇಳಿತ್ತು.

ಈ ಮಧ್ಯೆ ಬ್ರಿಟನ್‌ ಪ್ರಧಾನಿ ಬೋರಸ್‌ ಜಾನ್ಸನ್‌ ಅವರೂ, ಮಾತುಕತೆಯ ಸಲಹೆ ನೀಡಿದ್ದಾರೆ.

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.