ADVERTISEMENT

ಅಣ್ವಸ್ತ್ರ ಸಜ್ಜಿತ ಪಡೆಗೆ ಕಟ್ಟೆಚ್ಚರದಲ್ಲಿರಲು ವ್ಲಾಡಿಮಿರ್‌ ಪುಟಿನ್‌ ಆದೇಶ

ಅಣು ಸಮರದ ಭೀತಿ

ರಾಯಿಟರ್ಸ್
Published 27 ಫೆಬ್ರುವರಿ 2022, 22:15 IST
Last Updated 27 ಫೆಬ್ರುವರಿ 2022, 22:15 IST
ಉಕ್ರೇನ್‌ನಿಂದ ವಿಶೇಷ ವಿಮಾನದ ಮೂಲಕ ಭಾನುವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಗನನ್ನು ತಂದೆ ಬಿಗಿದಪ್ಪಿದ ಕ್ಷಣ –ಎಎಫ್‌ಪಿ ಚಿತ್ರ
ಉಕ್ರೇನ್‌ನಿಂದ ವಿಶೇಷ ವಿಮಾನದ ಮೂಲಕ ಭಾನುವಾರ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಗನನ್ನು ತಂದೆ ಬಿಗಿದಪ್ಪಿದ ಕ್ಷಣ –ಎಎಫ್‌ಪಿ ಚಿತ್ರ   

ಕೀವ್‌/ಮಾಸ್ಕೊ: ರಷ್ಯಾ–ಉಕ್ರೇನ್‌ ಸಂಘರ್ಷವು ಇನ್ನಷ್ಟು ತೀವ್ರಗೊಂಡಿದೆ. ಅಣ್ವಸ್ತ್ರ ಹೊಂದಿರುವ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಸೇನೆಗೆ ಭಾನುವಾರ ಆದೇಶಿಸಿದ್ದಾರೆ. ಆದರೆ, ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರ ಹಾರ್ಕಿವ್‌ನಿಂದ ರಷ್ಯಾ ಸೈನಿಕರನ್ನು ಹೊರಗಟ್ಟಲಾಗಿದೆ ಎಂದು ನಗರದ ಗವರ್ನರ್‌ ಹೇಳಿಕೊಂಡಿದ್ದಾರೆ.

ಅಣ್ವಸ್ತ್ರ ಹೊಂದಿರುವ ಪಡೆಗಳನ್ನು ಸಜ್ಜಾಗಿ ಇರಿಸಲು ಪುಟಿನ್‌ ಆದೇಶ ನೀಡಿದ್ದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪುಟಿನ್‌ ಅವರು ಯುದ್ಧವನ್ನು ತೀವ್ರಗೊಳಿಸುತ್ತಿರುವ ರೀತಿಯು ಸ್ವೀಕಾರಾರ್ಹ ಅಲ್ಲವೇ ಅಲ್ಲ ಎಂದು ಅಮೆರಿಕ ಹೇಳಿದೆ.

ಎರಡನೇ ಮಹಾಯುದ್ಧದ ನಂತರ ಉಕ್ರೇನ್‌ನ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿ ಆರಂಭವಾಗಿ ನಾಲ್ಕು ದಿನಗಳಾಗಿವೆ. ಉಕ್ರೇನ್‌–ಬೆಲರೂಸ್‌ ಗಡಿಯಲ್ಲಿ ರಷ್ಯಾ ಜತೆಗೆ ಮಾತುಕತೆ ನಡೆಯಲಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿಯು ತಿಳಿಸಿದೆ. ಯಾವುದೇ ಪೂರ್ವಷರತ್ತು ಇಲ್ಲದೆಯೇ ಮಾತುಕತೆ ನಡೆಯಲಿದೆ ಎಂದು ಕಚೇರಿಯು ಹೇಳಿದೆ.

ADVERTISEMENT

ಉಕ್ರೇನ್‌ನ ವಿವಿಧ ನಗರಗಳ ಮೇಲೆ ರಷ್ಯಾದ ಕ್ಷಿಪಣಿ ದಾಳಿಯು ಮತ್ತಷ್ಟು ತೀವ್ರಗೊಂಡಿದೆ. ಲಕ್ಷಾಂತರ ನಾಗರಿಕರು ದೇಶ ತೊರೆದಿದ್ದಾರೆ. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ನೆರೆಯ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ರಾಜಧಾನಿ ಕೀವ್, ಉಕ್ರೇನ್‌ ನಿಯಂತ್ರಣದಲ್ಲಿಯೇ ಇದೆ. ಜನವಸತಿ ಪ್ರದೇಶಗಳ ಮೇಲೆಯೇ ರಷ್ಯಾ ದಾಳಿ ನಡೆಸುತ್ತಿದ್ದರೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಎದೆಗುಂದಿಲ್ಲ. ಜನರ ಜತೆಯಲ್ಲಿಯೇ ನಿಂತು, ರಷ್ಯಾವನ್ನು ಎದುರಿಸಲು ಹುರಿದುಂಬಿಸುತ್ತಿದ್ದಾರೆ.

ಆದರೆ, ಆಕ್ರಮಣವನ್ನು ‘ವಿಶೇಷ ಸೇನಾ ಕಾರ್ಯಾಚರಣೆ’ ಎಂದು ಬಣ್ಣಿಸಿದ್ದ ಪುಟಿನ್‌ ಅವರು ಅಣ್ವಸ್ತ್ರಗಳನ್ನೂ ಹೊಂದಿರುವ ‘ದಾಳಿ ಪ್ರತಿರೋಧ ಪಡೆ’ಯನ್ನು ಕಟ್ಟೆಚ್ಚರದಲ್ಲಿ ಇರಲು ಸೂಚಿಸಿರುವುದು ನ್ಯಾಟೊ ಕಳವಳಕ್ಕೆ ಕಾರಣವಾಗಿದೆ.

ನ್ಯಾಟೊ ನಾಯಕರ ಆಕ್ರಮಣಕಾರಿ ಹೇಳಿಕೆ ಮತ್ತು ರಷ್ಯಾ ಮೇಲೆ ಹೇರಲಾಗಿರುವ ಆರ್ಥಿಕ ನಿರ್ಬಂಧಗಳನ್ನು ಪುಟಿನ್‌ ಅವರು ಉಲ್ಲೇಖಿಸಿದ್ದಾರೆ.

ರಷ್ಯಾ ಸೇನೆಯ ಕಾರ್ಯಾಚರಣೆಗೆ ಯಾರೇ ಅಡ್ಡಿ ಬಂದರೂ ಅವರು ಹಿಂದೆಂದೂ ಕಂಡಿರದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪುಟಿನ್‌ ಅವರು ಈ ಹಿಂದೆಯೂ ನೀಡಿದ್ದರು. ಈ ಎಚ್ಚರಿಕೆಯಲ್ಲಿ ಅಣ್ವಸ್ತ್ರ ಬಳಕೆಯ ಧ್ವನಿ ಇತ್ತು ಎಂದು ವಿಶ್ಲೇಷಿಸಲಾಗಿತ್ತು. ಫ್ರಾನ್ಸ್‌ ವಿದೇಶಾಂಗ ಸಚಿವ ಇದಕ್ಕೆ ತಿರುಗೇಟು ನೀಡಿದ್ದರು. ನ್ಯಾಟೊ ಕೂಡ ಅಣ್ವಸ್ತ್ರ ಹೊಂದಿರುವ ಮೈತ್ರಿಕೂಟ ಎಂಬುದನ್ನು ಪುಟಿನ್‌ ಮರೆಯಬಾರದು ಎಂದಿದ್ದರು.

ರಷ್ಯಾದ ದಾಳಿಗೆ ಪಶ್ಚಿಮದ ದೇಶಗಳು ನಿರ್ಬಂಧ ಮತ್ತು ನಿಷೇಧಗಳ ಮೂಲಕವೇ ತಿರುಗೇಟು ನೀಡುತ್ತಿವೆ.

*ಉಕ್ರೇನ್‌ ತೊರೆದು ನೆರೆಯ ದೇಶಗಳಿಗೆ ಹೋಗಿ ಆಶ್ರಯ ಪಡೆದವರ ಸಂಖ್ಯೆ 4 ಲಕ್ಷಕ್ಕೆ ಏರಿದೆ ಎಂದು ವಿಶ್ವ ಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ ಕಚೇರಿ ಹೇಳಿದೆ. ಕನಿಷ್ಠ 1.96 ಲಕ್ಷ ಜನರು ಪೋಲೆಂಡ್‌ಗೆ ಮತ್ತು ಇತರರು ಹಂಗೆರಿ ಮತ್ತು ರೊಮೇನಿಯಾಕ್ಕೆ ಹೋಗಿದ್ದಾರೆ

*ರಷ್ಯಾದ 4,300 ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಆದರೆ, ಇದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ

* ಹಾರ್ಕಿವ್‌ನಲ್ಲಿ ಭಾನುವಾರ ಮುಂಜಾವಿಗೂ ಮುನ್ನವೇ ನೈಸರ್ಗಿಕ ಅನಿಲ ಪೈಪ್‌ಲೈನ್‌ ಅನ್ನು ರಷ್ಯಾ ಪಡೆಗಳು ಸ್ಫೋಟಿಸಿವೆ. ಪರಿಣಾಮವಾಗಿ ಮುಗಿಲೆತ್ತರ ದಟ್ಟ ಹೊಗೆ ಆವರಿಸಿತ್ತು

* ಉಕ್ರೇನ್‌–ಬೆಲರೂಸ್‌ನ ಗಡಿಯಲ್ಲಿ ಉಕ್ರೇನ್‌– ರಷ್ಯಾ ನಿಯೋಗದ ಮಾತುಕತೆ ನಡೆಯಲಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿ ಹೇಳಿದೆ. ಆದರೆ, ಸಮಯ ಮತ್ತು ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.