ADVERTISEMENT

ಉಕ್ರೇನ್‌ ಮೇಲೆ ಮತ್ತೆ ಕ್ಷಿಪಣಿ ದಾಳಿ ತೀವ್ರ; ನೀರು, ವಿದ್ಯುತ್‌ ವ್ಯತ್ಯಯ

ಏಜೆನ್ಸೀಸ್
Published 5 ಡಿಸೆಂಬರ್ 2022, 16:01 IST
Last Updated 5 ಡಿಸೆಂಬರ್ 2022, 16:01 IST
ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದ ಬಾಖ್ಮಟ್‌ನಲ್ಲಿ ರಷ್ಯಾ ಪಡೆಗಳ ಶೆಲ್‌ ದಾಳಿಗೆ ತುತ್ತಾದ ಕಟ್ಟಡಗಳು ಹೊತ್ತಿ ಉರಿದವು– ಎಎಫ್‌ಪಿ ಚಿತ್ರ
ಉಕ್ರೇನ್‌ನ ಡೊನೆಟ್‌ಸ್ಕ್‌ ಪ್ರದೇಶದ ಬಾಖ್ಮಟ್‌ನಲ್ಲಿ ರಷ್ಯಾ ಪಡೆಗಳ ಶೆಲ್‌ ದಾಳಿಗೆ ತುತ್ತಾದ ಕಟ್ಟಡಗಳು ಹೊತ್ತಿ ಉರಿದವು– ಎಎಫ್‌ಪಿ ಚಿತ್ರ   

ಕೀವ್‌: ಉಕ್ರೇನ್‌ ದೇಶದ ಹಲವು ಭಾಗಗಳ ಮೇಲೆ ರಷ್ಯಾ ಸೋಮವಾರ ಕ್ಷಿಪಣಿಗಳ ದಾಳಿ ನಡೆಸಿದ್ದು, ಇಂಧನ ಮೂಲಸೌಕರ್ಯಗಳು ಹಾನಿಗೀಡಾಗಿವೆ. ಹಲವು ಭಾಗಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್‌ ವ್ಯತ್ಯಯ ಎದುರಾಗಿದೆ ಎಂದುಅಧಿಕಾರಿಗಳು ಹೇಳಿದ್ದಾರೆ.

ಒಡೆಸ್ಸಾ, ಚೆರ್ಕಾಸಿ, ಕ್ರಿವಿ ರಿಹ್‌ ಸೇರಿ ಹಲವೆಡೆ ಸ್ಫೋಟಗಳು ಸಂಭವಿಸಿವೆ. ಒಡೆಸಾದಲ್ಲಿ ನೀರು ಸರಬರಾಜು ಪಂಪಿಂಗ್‌ ಸ್ಟೇಷನ್‌ ಕ್ಷಿಪಣಿ ದಾಳಿಯಿಂದ ಧ್ವಂಸವಾಗಿದೆ. ಇಡೀ ನಗರಕ್ಕೆ ನೀರು ಇಲ್ಲದಂತಾಗಿದೆ. ವಾಯುದಾಳಿಯ ಎಚ್ಚರಿಕೆ ಗಂಟೆಗಳು ಧ್ವನಿಸಿದ್ದರಿಂದ ನಾಗರಿಕರುಸುರಕ್ಷಿತ ನೆಲೆಗಳಲ್ಲಿ ಆಶ್ರಯ ಪಡೆದರು.

‘ರಷ್ಯಾ ತನ್ನ ದಕ್ಷಿಣದ ನೆಲದಿಂದ, ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರಗಳಲ್ಲಿ ಹಡಗುಗಳಿಂದಲೂ ಕ್ಷಿಪಣಿಗಳ ದಾಳಿ ಮಾಡಿದೆ. ಕಾರ್ಯತಂತ್ರದ ಬಾಂಬರ್‌ ವಿಮಾನಗಳೂ ಕ್ಷಿಪಣಿ ಪ್ರಹಾರ ನಡೆಸಿವೆ. ಕ್ಷಿಪಣಿ ಹೊಡೆದುರುಳಿಸಲು ಉಕ್ರೇನ್‌ ವಾಯು ರಕ್ಷಣಾ ವ್ಯವಸ್ಥೆಗೆ ಕಷ್ಟವಾಗುವಂತೆ ಹಲವು ಮಾರ್ಗಗಳಲ್ಲಿ ದಾಳಿ ನಡೆಯುತ್ತಿದೆ’ ಎಂದುಉಕ್ರೇನ್‌ ವಾಯುಪಡೆ ವಕ್ತಾರ ಯೂರಿ ಇನತ್‌ ತಿಳಿಸಿದ್ದಾರೆ.

ADVERTISEMENT

‘ಶತ್ರುಗಳು ಮತ್ತೆ ಉಕ್ರೇನ್‌ ಮೇಲೆ ಹೊಸದಾಗಿ ಕ್ಷಿಪಣಿ ದಾಳಿ ಮೂಲಕ ಆಕ್ರಮಣಕ್ಕೆ ಇಳಿದಿದ್ದಾರೆ’ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿ ಉಪ ಮುಖ್ಯಸ್ಥ ಕಿರಿಲೊ ಟಿಮೊಶೆಂಕೊ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ರಷ್ಯಾ ದಾಳಿಯಿಂದಾಗಿ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಪ್ರಧಾನ ಮಂತ್ರಿ ಡೆನಿಸ್ ಶ್ಮೈಹಲ್ಟೆಲಿಗ್ರಾಮ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.