ADVERTISEMENT

ಉಕ್ರೇನ್ –ರಷ್ಯಾ ಶಾಂತಿ ಮಾತುಕತೆ: ಬರ್ಲಿನ್‌ಗೆ ಅಮೆರಿಕ ಅಧಿಕಾರಿಗಳ ಭೇಟಿ 

ಏಜೆನ್ಸೀಸ್
Published 14 ಡಿಸೆಂಬರ್ 2025, 15:57 IST
Last Updated 14 ಡಿಸೆಂಬರ್ 2025, 15:57 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ಬರ್ಲಿನ್‌ : ರಷ್ಯಾ–ಉಕ್ರೇನ್ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹಾಗೂ ಅಮೆರಿಕದ ರಾಯಭಾರ ಅಧಿಕಾರಿಗಳು ಭಾನುವಾರ ಜರ್ಮನಿಯ ಬರ್ಲಿನ್‌ಗೆ ಭೇಟಿ ನೀಡಿದ್ದಾರೆ. 

ಈ ಕುರಿತು ಝೆಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ. ಅಮೆರಿಕ ಮತ್ತು ಯುರೋಪ್‌ನ ಅಧಿಕಾರಿಗಳು ಬರ್ಲಿನ್‌ನಲ್ಲಿ ಸರಣಿ ಮಾತುಕತೆಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿಶೇಷ ರಾಯಭಾರಿ ಸ್ಟೀವ್‌ ಹಾಗೂ ಇತರೆ ಅಧಿಕಾರಿಗಳನ್ನು ತಾವು ವೈಯಕ್ತಿಕವಾಗಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿಯೂ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ನ್ಯಾಟೊ ರಾಷ್ಟ್ರಗಳಿಗೆ ಒದಗಿಸುವಂತ ಭದ್ರತಾ ಖಾತರಿಗಳನ್ನು ಉಕ್ರೇನ್‌ಗೂ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಒದಗಿಸಬೇಕು ಎಂದು ಝೆಲೆನ್‌ಸ್ಕಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿವೆ. 

ADVERTISEMENT

ಇದಕ್ಕೆ ಉತ್ತರಿಸಿರುವ ಝೆಲೆನ್‌ಸ್ಕಿ,‘ರಷ್ಯಾದ ಮತ್ತೊಂದು ಸುತ್ತಿನ ಅತಿಕ್ರಮಣವನ್ನು ತಡೆಗಟ್ಟಲು ಈ ಭದ್ರತಾ ಖಾತರಿ ಅಗತ್ಯವಿದೆ. ಅಲ್ಲದೇ, ಹಿಂದೆಯೇ ನಾವು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ’ ಎಂದಿದ್ದಾರೆ. 

ಏತನ್ಮಧ್ಯೆ, ಡೊನೆಟ್‌ಸ್ಕ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಪಡೆಯು ಸಂಪೂರ್ಣವಾಗಿ ತನ್ನ ಸೇನಾ ನಿಯೋಜನೆಯನ್ನು ಹಿಂಪಡೆಯಬೇಕು ಹಾಗೂ ನ್ಯಾಟೊ ಸೇರ್ಪಡೆಗೊಳ್ಳುವ ಪ್ರಯತ್ನವನ್ನು ಕೈಬಿಡಬೇಕು ಎಂದು ರಷ್ಯಾ ಮತ್ತೆ ಪುನರುಚ್ಚರಿಸಿದೆ. ಈ ಮೂಲಕ ಶಾಂತಿ ಮಾತುಕತೆಗಳು ಫಲಪದ್ರವಾಗುವುದು ಸಾಧ್ಯವೇ ಎಂಬ ಶಂಕೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.