ADVERTISEMENT

ಇಸ್ತಾಂಬುಲ್‌ನಲ್ಲಿ ಉಕ್ರೇನ್‌–ರಷ್ಯಾ ಶಾಂತಿ ಮಾತುಕತೆ: ಟರ್ಕಿಗೆ ಬಂದ ಝೆಲೆನ್‌ಸ್ಕಿ

ಪುಟಿನ್‌ ಗೈರು

ಎಪಿ
Published 15 ಮೇ 2025, 12:37 IST
Last Updated 15 ಮೇ 2025, 12:37 IST
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಗುರುವಾರ ಟರ್ಕಿಯ ಅಂಕಾರಾಗೆ ಬಂದಿಳಿದರು –ಎಪಿ ಚಿತ್ರ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಗುರುವಾರ ಟರ್ಕಿಯ ಅಂಕಾರಾಗೆ ಬಂದಿಳಿದರು –ಎಪಿ ಚಿತ್ರ   

ಇಸ್ತಾಂಬುಲ್‌, ಟರ್ಕಿ: ಉಕ್ರೇನ್‌– ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಉಭಯ ದೇಶಗಳ ನಿಯೋಗಗಳು ಗುರುವಾರ ಟರ್ಕಿಗೆ ಬಂದಿಳಿದಿವೆ.

ಆದರೆ, ಮಾತುಕತೆ ವೇಳೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು ಪರಸ್ಪರ ಭೇಟಿಯಾಗುವ ನಿರೀಕ್ಷೆ ಹುಸಿಯಾಗಿದೆ. ಝೆಲೆನ್‌ಸ್ಕಿ ಅವರು ಗುರುವಾರ ಟರ್ಕಿಗೆ ಬಂದಿಳಿದರೂ, ಮಾತುಕತೆ ನಡೆಸಲಿರುವ ರಷ್ಯಾದ ನಿಯೋಗದ ಜತೆ ಪುಟಿನ್‌ ಬಂದಿಲ್ಲ.

ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆಗಾಗಿ ಸರ್ಕಾರದ ಕೆಳಹಂತದ ಅಧಿಕಾರಿಗಳನ್ನೊಳಗೊಂಡ ರಷ್ಯಾದ ನಿಯೋಗ ಇಸ್ತಾಂಬುಲ್‌ಗೆ ಆಗಮಿಸಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಖರೋವಾ ಗುರುವಾರ ತಿಳಿಸಿದ್ದಾರೆ. ಝೆಲೆನ್‌ಸ್ಕಿ ನೇತೃತ್ವದ ಉಕ್ರೇನ್‌ನ ನಿಯೋಗ ಟರ್ಕಿಯ ರಾಜಧಾನಿ ಅಂಕಾರಾಗೆ ಬಂದಿಳಿಯಿತು.

ADVERTISEMENT

ತನ್ನ ನಿಯೋಗದಲ್ಲಿರುವ ಅಧಿಕಾರಿಗಳ ಹೆಸರುಗಳನ್ನು ರಷ್ಯಾ ಬುಧವಾರ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪುಟಿನ್‌ ಹೆಸರು ಇರಲಿಲ್ಲ. ರಷ್ಯಾ, ಶಾಂತಿ ಮಾತುಕತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಟೀಕೆಯೂ ಕೇಳಿಬಂದಿದೆ.

ಪುಟಿನ್ ಅವರ ಆಪ್ತರಾದ ವ್ಲಾದಿಮಿರ್ ಮೆಡಿನ್‌ಸ್ಕಿ ಅವರು ರಷ್ಯಾ ನಿಯೋಗದ ನೇತೃತ್ವ ವಹಿಸಿದ್ದು, ಇತರ ಮೂವರು ಹಿರಿಯ ಅಧಿಕಾರಿಗಳು ಜತೆಗಿದ್ದಾರೆ. ಸರ್ಕಾರದ ಕೆಳ ಹಂತದ ನಾಲ್ವರು ಅಧಿಕಾರಿಗಳು ಕೂಡ ತಂಡದಲ್ಲಿದ್ದಾರೆ.

ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಕುರಿತು ಮಾತನಾಡಲು ಟರ್ಕಿಯಲ್ಲಿ ವೈಯಕ್ತಿಕವಾಗಿ ಭೇಟಿಯಾಗುವಂತೆ ಝೆಲೆನ್‌ಸ್ಕಿ ಅವರು ರಷ್ಯಾ ಅಧ್ಯಕ್ಷರಿಗೆ ಸವಾಲು ಹಾಕಿದ್ದರು. ‘ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್ ಅವರನ್ನು ಭೇಟಿಯಾಗಲು ಅಂಕಾರಾಗೆ ಪ್ರಯಾಣಿಸುತ್ತೇನೆ ಮತ್ತು ಅಲ್ಲಿ ಪುಟಿನ್‌ ಅವರಿಗಾಗಿ ಕಾಯುತ್ತೇನೆ’ ಎಂದಿದ್ದರು.

‘ಝೆಲೆನ್‌ಸ್ಕಿ ಅವರು ಪುಟಿನ್‌ ಜತೆ ಮಾತ್ರ ಮಾತುಕತೆ ನಡೆಸುವರು. ರಷ್ಯಾದ ನಿಯೋಗದ ಇತರ ಅಧಿಕಾರಿಗಳ ಜತೆ ಮಾತನಾಡಲು ಸಿದ್ಧರಿಲ್ಲ’ ಎಂದು ಉಕ್ರೇನ್‌ ಈಚೆಗೆ ಹೇಳಿತ್ತು.

ಅಚ್ಚರಿಯಾಗಿಲ್ಲ: ಟ್ರಂಪ್

ಉಕ್ರೇನ್‌ ಜತೆಗಿನ ಮಾತುಕತೆಯಲ್ಲಿ ವ್ಲಾದಿಮಿರ್‌ ಪುಟಿನ್‌ ಅವರು ಪಾಲ್ಗೊಳ್ಳದಿರುವುದು ತಮಗೆ ಅಚ್ಚರಿ ಉಂಟುಮಾಡಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ. ಇಸ್ತಾಂಬುಲ್‌ನಲ್ಲಿ ನಡೆಯುವ ಮಾತುಕತೆಯಲ್ಲಿ ಪರಸ್ಪರ ಭೇಟಿಯಾಗಬೇಕು ಎಂದು ಟ್ರಂಪ್‌ ಅವರು ಝೆಲೆನ್‌ಸ್ಕಿ ಹಾಗೂ ಪುಟಿನ್‌ಗೆ ಒತ್ತಾಯಿಸಿದ್ದರು. ಆದರೆ ಪುಟಿನ್‌ ಅವರ ಗೈರುಹಾಜರಿ ನಿರೀಕ್ಷಿತವೇ ಆಗಿತ್ತು ಎಂಬ ಧಾಟಿಯಲ್ಲಿ ಟ್ರಂಪ್‌ ಮಾತನಾಡಿದ್ದಾರೆ. ‘ನಾನು ಇಲ್ಲದಿದ್ದರೆ ಪುಟಿನ್‌ ಅಲ್ಲಿಗೆ (ಇಸ್ತಾಂಬುಲ್‌) ಹೋಗುತ್ತಾರೆ ಎಂದು ಭಾವಿಸಿರಲಿಲ್ಲ’ ಎಂದು ದೋಹಾ ಭೇಟಿಯಲ್ಲಿರುವ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.