ADVERTISEMENT

ಶಿಕ್ಷಣ ಹಕ್ಕು ರಕ್ಷಣೆಗೆ ಕ್ರಮ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಅಂಗೀಕಾರ

ಶಾಲೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ದಾಳಿಗೆ ಖಂಡನೆ

ಏಜೆನ್ಸೀಸ್
Published 30 ಅಕ್ಟೋಬರ್ 2021, 10:56 IST
Last Updated 30 ಅಕ್ಟೋಬರ್ 2021, 10:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ವಿಶ್ವದ ವಿವಿಧ ಭಾಗಗಳಲ್ಲಿ ಶಾಲೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಲವಾಗಿ ಖಂಡಿಸಿದೆ. ಅಲ್ಲದೇ, ಸಂಘರ್ಷಮಯವಾದ ಇಂಥ ಸನ್ನಿವೇಶದಲ್ಲಿ ಶಿಕ್ಷಣದ ಹಕ್ಕನ್ನು ರಕ್ಷಿಸಲು ಪ್ರತಿಯೊಂದು ರಾಷ್ಟ್ರ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದೆ.

‘ಜೀವನ ನಿರ್ವಹಣೆ, ಶಾಂತಿ–ಸುರಕ್ಷತೆ ಸಾಧಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು’ ಎಂಬ ನಿರ್ಣಯವನ್ನು ಶುಕ್ರವಾರ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗಿದೆ.

‘ಶಿಕ್ಷಣ ಹಕ್ಕು ರಕ್ಷಿಸುವುದಕ್ಕೆ ಸಂಬಂಧಿಸಿ, ಭದ್ರತಾ ಮಂಡಳಿಯು ಇದೇ ಮೊದಲ ಬಾರಿಗೆ ಇಂಥ ವಿಶೇಷ ನಿರ್ಣಯ ಅಂಗೀಕರಿಸಿದೆ’ ಎಂದು ವಿಶ್ವಸಂಸ್ಥೆಯಲ್ಲಿ ನಾರ್ವೆ ರಾಯಭಾರಿ ಮೋನಾ ಜುಲ್‌ ಹೇಳಿದರು.

ADVERTISEMENT

ಈ ನಿರ್ಣಯವನ್ನು ಮಂಡಿಸುವ ಸಂದರ್ಭದಲ್ಲಿ ಮಾತನಾಡಿದ ಮೋನಾ ಅವರು, ‘ವಿಶ್ವದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾಯ ಬಂದೊದಗಿದೆ. 2014 ರಿಂದ 2019ರ ಅವಧಿಯಲ್ಲಿ ಕನಿಷ್ಠ 93 ದೇಶಗಳಲ್ಲಿ 11,000 ದಾಳಿಗಳು ನಡೆದಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ 22 ಸಾವಿರಕ್ಕೂ ಅಧಿಕ ಮಂದಿ ತೊಂದರೆಗೆ ಒಳಗಾಗಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು.

‘ಇಂಥ ದಾಳಿಗಳನ್ನು ತಡೆಗಟ್ಟುವ ಸಂಬಂಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾನಿಗೆ ಒಳಗಾಗಿರುವ ಶಾಲೆಗಳು ಹಾಗೂ ಶೈಕ್ಷಣಿಕ ಸೌಲಭ್ಯಗಳ ಮರುನಿರ್ಮಾಣಕ್ಕೆ ಯೋಜನೆ ರೂಪಿಸಬೇಕು’ ಎಂದೂ ನಿರ್ಣಯ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.