ADVERTISEMENT

ಆಹಾರ, ಅಗತ್ಯ ವಸ್ತು ಸಿಗದೇ ಜನ ಕಂಗಾಲು: ವಿಶ್ವಸಂಸ್ಥೆ ಕಳವಳ

ಹಿಂಸಾಚಾರಕ್ಕೆ ನಲುಗಿದ ಸೆಂಟ್ರಲ್‌ ಆಫ್ರಿಕನ್ ರಿಪಬ್ಲಿಕ್

ಏಜೆನ್ಸೀಸ್
Published 2 ಫೆಬ್ರುವರಿ 2021, 5:48 IST
Last Updated 2 ಫೆಬ್ರುವರಿ 2021, 5:48 IST
ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ತೊರೆದ ಕುಟುಂಬವೊಂದು ಕ್ಯಾಮರೂನ್‌ನಲ್ಲಿ ಆಶ್ರಯ ಪಡೆದಿದೆ (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ
ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ತೊರೆದ ಕುಟುಂಬವೊಂದು ಕ್ಯಾಮರೂನ್‌ನಲ್ಲಿ ಆಶ್ರಯ ಪಡೆದಿದೆ (ಸಂಗ್ರಹ ಚಿತ್ರ) –ರಾಯಿಟರ್ಸ್‌ ಚಿತ್ರ   

ವಿಶ್ವಸಂಸ್ಥೆ: ಹಿಂಸಾಚಾರದಿಂದ ನಲುಗಿರುವ ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ನಲ್ಲಿ ಈಗ ಲಕ್ಷಾಂತರ ಜನರು ಆಹಾರ ಹಾಗೂ ಅಗತ್ಯ ವಸ್ತುಗಳು ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕ್ಯಾಮರೂನ್‌ ಮೂಲಕ ಆಹಾರ, ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿತ್ತು. ಈಗ ಈ ಮಾರ್ಗವನ್ನು ಬಂದ್‌ ಮಾಡಿರುವ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

‘ದೇಶದ 20.3 ಲಕ್ಷ ಜನರು ಆಹಾರ ಸಿಗದೇ ತೊಂದರೆಗೆ ಸಿಲುಕಿದ್ದಾರೆ. 2 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದಿದ್ದು, ಸುರಕ್ಷಿತ ಸ್ಥಳಗಳನ್ನು ಹುಡುಕಿ ಬೇರೆ ದೇಶಗಳಿಗೂ ವಲಸೆ ಹೋಗಿದ್ದಾರೆ’ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್‌ ದುಜಾರಿಕ್‌ ಹೇಳಿದರು.

‘92,000 ನಿರಾಶ್ರಿತರು ನೆರೆಯ ಕಾಂಗೊ ದೇಶ ತಲುಪಿದ್ದಾರೆ. 13,200ಕ್ಕೂ ಅಧಿಕ ನಿರಾಶ್ರಿತರು ಕ್ಯಾಮರೂನ್‌, ಚಾಡ್‌ ಮತ್ತು ಕಾಂಗೊ ದಾಟಿದ್ದು, ಸುರಕ್ಷಿತ ಸ್ಥಳ ಅರಸಿ ಮುನ್ನಡೆದಿದ್ದಾರೆ’ ಎಂದೂ ಅವರು ತಿಳಿಸಿದರು.

ADVERTISEMENT

ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಬೋಜಿಜ್‌ ಹಾಗೂ ಆತನ ಸಹಚರರು ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ಲಿನ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ಫ್ರಾಂಕೋಯಿಸ್‌ ಚುನಾವಣೆಗೆ ಸ್ಪರ್ಧಿಸಲು ಆಗಿರಲಿಲ್ಲ. ಹೀಗಾಗಿ ಅವರು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.