ADVERTISEMENT

ಮ್ಯಾನ್ಮಾರ್: ನಾಗರಿಕರ ಮೇಲಿನ ದೌರ್ಜನ್ಯ ಖಂಡಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ಏಜೆನ್ಸೀಸ್
Published 2 ಏಪ್ರಿಲ್ 2021, 12:10 IST
Last Updated 2 ಏಪ್ರಿಲ್ 2021, 12:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ:ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಾಗರಿಕರ ಮೇಲಿನ ದೌರ್ಜನ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ತೀವ್ರವಾಗಿ ಖಂಡಿಸಿದ್ದರೂ ಸೇನಾಡಳಿತದ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಿದೆ.

ಮ್ಯಾನ್ಮಾರ್‌ನಲ್ಲಿ ನಡೆದ ಮಿಲಿಟರಿ ದಂಗೆಯ ವಿರುದ್ಧ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಒತ್ತಾಯ ಹೇರುವುದನ್ನು ಅದು ಕೈಬಿಟ್ಟಿದೆ.

ಈ ಕುರಿತು ಭದ್ರತಾ ಮಂಡಳಿ ಸದಸ್ಯರ ಸಭೆಯಲ್ಲಿ ಬುಧವಾರ ನಡೆದ ಮಾತುಕತೆಗಳ ನಂತರ, ಮಂಡಳಿಯ ಎಲ್ಲ 15 ಸದಸ್ಯರು, ಬ್ರಿಟನ್‌ ಸಿದ್ಧಪಡಿಸಿದ ಕರಡು ಪತ್ರಿಕಾ ಹೇಳಿಕೆಯನ್ನು ಅನುಮೋದಿಸಿದರು. ಆ ಹೇಳಿಕೆಯಲ್ಲಿ ಮ್ಯಾನ್ಮಾರ್‌ನಲ್ಲಿ ನಾಗರಿಕರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ.

ADVERTISEMENT

ಕರಡು ಹೇಳಿಕೆಯ ಮೂಲ ಪ್ರತಿಯಲ್ಲಿನ ಅಂಶಗಳು ಇನ್ನಷ್ಟು ಬಲವಾಗಿದ್ದು, ಅದರಲ್ಲಿ ಭದ್ರತಾ ಮಂಡಳಿ ಮುಂದಿನ ಹಂತಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಸ್ತಾಪಿಸಿತ್ತು. ಜತೆಗೆ, ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮವನ್ನು ‘ಅಸಹ್ಯ‘ ಎಂದು ಉಲ್ಲೇಖಿಸಿತ್ತು. ಇದೇ ವೇಳೆ ನೂರಾರು ನಾಗರಿಕರ ಹತ್ಯೆಯನ್ನು ಬಲವಾಗಿ ಖಂಡಿಸಿತ್ತು.

ಆದರೆ, ಮ್ಯಾನ್ಮಾರ್‌ನ ನೆರೆಯ ರಾಷ್ಟ್ರ ಚೀನಾದ ಒತ್ತಾಯದ ಮೇರೆಗೆ ‘ಮುಂದಿನ ಕ್ರಮಗಳ’ ಕುರಿತ ಉಲ್ಲೇಖವನ್ನು ಕರಡಿನಿಂದ ತೆಗೆಯಲಾಯಿತು. ಅಂತಿಮ ಹೇಳಿಕೆಯಲ್ಲಿ ‘ಹತ್ಯೆ‘ ಮತ್ತು ‘ಅಸಹ್ಯ‘ ಎಂಬ ಪದಗಳನ್ನು ಒಳಗೊಂಡಂತೆ ಒರಟು ಭಾಷೆಯನ್ನು ಮೃದುಗೊಳಿಸಲಾಯಿತು ಎಂದು ಮಂಡಳಿಯ ರಾಜತಾಂತ್ರಿಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.