ADVERTISEMENT

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು

ಏಜೆನ್ಸೀಸ್
Published 8 ಏಪ್ರಿಲ್ 2022, 10:45 IST
Last Updated 8 ಏಪ್ರಿಲ್ 2022, 10:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಆದೇಶ ಹೊರಡಿಸಿದೆ. ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು. ಅಮಾನತು ಮಾಡಬಹುದು ಎಂಬ ನಿರ್ಣಯಕ್ಕೆ ಹೆಚ್ಚಿನ ಮತಗಳು ಬಂದ ಕಾರಣ, ಸಾಮಾನ್ಯ ಸಭೆಯು ಈ ಕ್ರಮ ತೆಗೆದುಕೊಂಡಿದೆ.

ಉಕ್ರೇನ್‌ನ ಬುಕಾ ನಗರದಿಂದ ವಾಪಸ್ಸಾಗುವಾಗ ರಷ್ಯಾ ಸೇನೆಯು ನೂರಾರು ನಾಗರಿಕರನ್ನು ಕೊಂದು ಹಾಕಿದೆ ಎಂದು ಉಕ್ರೇನ್‌ ಆರೋಪಿಸಿತ್ತು. ಉಕ್ರೇನ್‌ನಲ್ಲಿ ರಷ್ಯಾ ಎಸಗಿರಬಹುದಾದ ಯುದ್ಧಾಪರಾಧಗಳ ಕಾರಣ ಮಾನವ ಹಕ್ಕುಗಳ ಮಂಡಳಿಯಿಂದ ಅದನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆ ಮಂಡಿಸಿತ್ತು.

193 ಸದಸ್ಯ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಗುರುವಾರ ಮತಕ್ಕೆ ಹಾಕಲಾಗಿತ್ತು. ನಿರ್ಣಯದ ಪರವಾಗಿ 93 ದೇಶಗಳು ಮತ ಹಾಕಿದವು. ನಿರ್ಣಯದ ವಿರುದ್ಧವಾಗಿ 24 ದೇಶಗಳು ಮತ ಹಾಕಿದವು. ಭಾರತವೂ ಸೇರಿ 58 ದೇಶಗಳು ಮತದಾನದಿಂದ ದೂರ ಉಳಿದವು.ನಿರ್ಣಯವು ಅಂಗೀಕಾರವಾಗಲು ಮತ ಹಾಕಿದ ಸದಸ್ಯರ ಒಟ್ಟು
ಸಂಖ್ಯೆಯ ಮೂರನೇ ಎರಡರಷ್ಟು ಮತಗಳು ಬೇಕಿತ್ತು. 58 ದೇಶಗಳು ಮತದಾನದಿಂದ ದೂರ ಉಳಿದ ಕಾರಣ, ನಿರ್ಣಯದಲ್ಲಿದ್ದ ಸದಸ್ಯ ದೇಶಗಳ ಸಂಖ್ಯೆ 117ಕ್ಕೆ ಕುಸಿದಿತ್ತು. 93 ದೇಶಗಳು ಪರವಾಗಿ ಮತಹಾಕಿದ ಕಾರಣ, ನಿರ್ಣಯವು ಅಂಗೀಕಾರವಾಯಿತು.

ADVERTISEMENT

58 ದೇಶಗಳು ಮತದಾನದಿಂದ ದೂರ ಉಳಿದುದ್ದರ ಬಗ್ಗೆ ರಷ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ಮತದಾನದಿಂದ ದೂರ ಉಳಿದಿದ್ದನ್ನು ನಾವು, ನಿರ್ಣಯದ ಪರವಾದ ಮತ ಎಂದೇ ಪರಿಗಣಿಸುತ್ತೇವೆ. ಇದು ಆಯಾ ದೇಶಗಳೊಂದಿಗೆ, ನಮ್ಮ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ’ ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ನಾಗರಿಕರ ಹತ್ಯೆಯ ಬಗ್ಗೆ ಭಾರತವು ಆಘಾತ ವ್ಯಕ್ತಪಡಿಸಿತ್ತು. ಬುಕಾದಲ್ಲಿನ ಹತ್ಯೆಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂಬ ಬೇಡಿಕೆಗೆ ಬೆಂಬಲವಿದೆ ಎಂದು ಭಾರತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.