ADVERTISEMENT

ಇರಾನ್‌ ಮೇಲಿನ ನಿರ್ಬಂಧ ವಿಳಂಬ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತಿರಸ್ಕಾರ

ಏಜೆನ್ಸೀಸ್
Published 27 ಸೆಪ್ಟೆಂಬರ್ 2025, 15:50 IST
Last Updated 27 ಸೆಪ್ಟೆಂಬರ್ 2025, 15:50 IST
ವಿಶ್ವಸಂಸ್ಥೆ 
ವಿಶ್ವಸಂಸ್ಥೆ    

ವಿಶ್ವಸಂಸ್ಥೆ : ಇರಾನ್‌ ಮೇಲೆ ನಿರ್ಬಂಧ ವಿಧಿಸುವ ನಿರ್ಧಾರವನ್ನು ವಿಳಂಬಗೊಳಿಸುವ ರಷ್ಯಾ ಹಾಗೂ ಚೀನಾದ ಕೊನೆಯ ಹಂತದ ಪ್ರಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತಿರಸ್ಕರಿಸಿದೆ. ಕಳೆದೊಂದು ವಾರದಿಂದ ನಡೆದ ಸಭೆಯು ನಿರ್ದಿಷ್ಟ ಒಪ್ಪಂದಕ್ಕೆ ಬರಲು ವಿಫಲವಾಗಿದೆ ಎಂದು ಐರೋಪ್ಯ ದೇಶಗಳು ತಿಳಿಸಿವೆ.

ಇರಾನ್‌ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ನಿರ್ಬಂಧ ವಿಳಂ‌ಬಗೊಳಿಸುವ ನಿರ್ಣಯವನ್ನು ರಷ್ಯಾ ಹಾಗೂ ಚೀ‌ನಾ ಮಂಡಿಸಿತ್ತು. ನಿರ್ಣಯ ತಡೆಹಿಡಿಯಲು ಭದ್ರತಾ ಮಂಡಳಿಯ 9 ಸದಸ್ಯರ ಬೆಂಬಲ ಅಗತ್ಯವಿತ್ತು. ಶುಕ್ರವಾರ ಮಂಡಿಸಿದ ನಿರ್ಣಯಕ್ಕೆ ಯಾವುದೇ ಬೆಂಬಲ ಗಳಿಸಲು ಉಭಯ ರಾಷ್ಟ್ರಗಳು ವಿಫಲವಾದವು. ಶನಿವಾರದಿಂದಲೇ ಇರಾನ್‌ ಮೇಲೆ ನಿರ್ಬಂಧಗಳು ಅನ್ವಯವಾಗಲಿದೆ.

‘ರಾಜತಾಂತ್ರಿಕತೆ ಹಾಗೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಕುರಿತು ಐರೋಪ್ಯ ಒಕ್ಕೂಟದ ಸದಸ್ಯರು ಹಾಗೂ ಅಮೆರಿಕವು ಎರಡನೇ ಬಾರಿ ಚಿಂತನೆ ನಡೆಸಲಿದೆ ಎಂದು ಭಾವಿಸಿದ್ದೆವು. ಬೆದರಿಕೆಯಿಂದ ಆ ಪ್ರಾಂತ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ವಿಶ್ವಸಂಸ್ಥೆಯ ರಷ್ಯಾ ಉಪ ರಾಯಭಾರಿ ಡಿಮಿಟ್ರಿ ಪಾಲಿಅನಸ್ಕಿವ್‌ ತಿಳಿಸಿದ್ದಾರೆ.

ADVERTISEMENT

ಇರಾನ್‌ ಮೇಲೆ ಪುನಃ ನಿರ್ಬಂಧ ವಿಧಿಸುವ ಪ್ರಯತ್ನಕ್ಕೆ ಬ್ರಿಟನ್‌, ಫ್ರಾನ್ಸ್‌ ಹಾಗೂ ಜರ್ಮನಿಯು ಹೆಚ್ಚಿನ ಒತ್ತಡ ಹೇರಿದ್ದವು. ಇದರಿಂದ, ವಿದೇಶಗಳಲ್ಲಿರುವ ಇರಾನ್‌ನ ಆಸ್ತಿಗಳ ಮುಟ್ಟುಗೋಲು, ಶಸ್ತ್ರಾಸ್ತ್ರ ಒಪ್ಪಂದಗಳ ಸ್ಥಗಿತ, ಇರಾನ್‌ನ ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಮೇಲೆ ದಂಡ ಸೇರಿದಂತೆ ಹಲವು ನಿರ್ಬಂಧಗಳು ಅನ್ವಯವಾಗಲಿದೆ. ಇದರಿಂದ ಈಗಾಗಲೇ ತತ್ತರಿಸಿರುವ ಇರಾನ್‌ನ ಆರ್ಥಿಕತೆಯ ಮೇಲೆ ಇನ್ನಷ್ಟು ಹೊಡೆತ ಬೀಳಲಿದೆ. ಇರಾನ್‌ ಹಾಗೂ ಐರೋಪ್ಯ ರಾಷ್ಟ್ರಗಳ ಮಧ್ಯೆ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.