ADVERTISEMENT

2030ರ ವೇಳೆಗೆ ಏಡ್ಸ್‌ ನಿರ್ಮೂಲನೆಗೆ ಕ್ರಮ: ವಿಶ್ವಸಂಸ್ಥೆ ಘೋಷಣೆ

ಏಜೆನ್ಸೀಸ್
Published 9 ಜೂನ್ 2021, 6:09 IST
Last Updated 9 ಜೂನ್ 2021, 6:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: 2030ರ ವೇಳೆಗೆ ಏಡ್ಸ್‌ ನಿರ್ಮೂಲನೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಘೋಷಣೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸರ್ವಾನುಮತದ ಅನುಮೋದನೆ ನೀಡಿದೆ.

ವಾರ್ಷಿಕ ಎಚ್‌ಐವಿ ಸೋಂಕಿನ ಪ್ರಮಾಣವನ್ನು 3,70,000ಕ್ಕಿಂತ ಕಡಿಮೆ ಮಾಡುವುದು, ಏಡ್ಸ್‌ನಿಂದಾಗಿ ಸಂಭವಿಸುವ ಸಾವಿನ ಸಂಖ್ಯೆಯನ್ನು 2,50,000 ಕ್ಕಿಂತ ಕಡಿಮೆಗೊಳಿಸುವುದು ಸೇರಿದಂತೆ 18 ಪುಟಗಳ ದಾಖಲೆಯಲ್ಲಿ ವಿವರಿಸಲಾದ ವಿವಿಧ ಕ್ರಮಗಳ ಅನುಷ್ಠಾನಕ್ಕೆ 193 ಸದಸ್ಯ ರಾಷ್ಟ್ರಗಳು ಸಮ್ಮತಿಸಿದವು.

ಎಚ್‌ಐವಿಗೆ ಸಂಬಂಧಿಸಿದಂತೆ ಸಮಾಜದಲ್ಲಿರುವ ಕಳಂಕ, ಎಲ್ಲ ರೀತಿಯ ತಾರತಮ್ಯ ನಿವಾರಿಸಬೇಕು. ಎಚ್ಐವಿ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸುವುದನ್ನು ತ್ವರಿತಗೊಳಿಸುವುದು, ಏಡ್ಸ್‌ಗೆ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯಲು ಒತ್ತು ನೀಡಬೇಕು ಎಂದೂ ಸಾಮಾನ್ಯಸಭೆ ಪ್ರತಿಪಾದಿಸಿತು.

ADVERTISEMENT

‘ಕೋವಿಡ್‌–19 ಪಿಡುಗು’ ವಿಶ್ವದ ಎಲ್ಲ ರಾಷ್ಟ್ರಗಳ ಆರ್ಥಿಕತೆಯನ್ನು ಕುಸಿಯುವಂತೆ ಮಾಡಿದೆ. ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆಗೆ ಕಾರಣವಾಗಿದೆ. ಅಲ್ಲದೇ, ಏಡ್ಸ್‌ ಪತ್ತೆ ಕಾರ್ಯ ನಿಧಾನಗೊಂಡಿದೆ, ಔಷಧಿಗಳು ಹಾಗೂ ಚಿಕಿತ್ಸೆ ಸಿಗದಂತಾಗಿದೆ ಎಂಬ ಬಗ್ಗೆಯೂ ಸಾಮಾನ್ಯಸಭೆ ಚರ್ಚಿಸಿತು.

‘ಕೋವಿಡ್‌–19ನಿಂದಾಗಿ ಏಡ್ಸ್‌ ನಿರ್ಮೂಲನೆ ಕಾರ್ಯಕ್ರಮಕ್ಕೆ ತೀವ್ರ ಹಿನ್ನಡೆಯಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಕಡಿಮೆಯಾಗಿದೆ. ಆರೋಗ್ಯ ಸೇವೆಗೆ ಸಂಬಂಧಿಸಿದ ಸಿದ್ಧತೆಯಲ್ಲೂ ಕೊರತೆ ಕಂಡು ಬಂದಿದೆ ಎಂಬ ಬಗ್ಗೆಯೂ ಸಾಮಾನ್ಯಸಭೆ ಕಳವಳ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.