ADVERTISEMENT

ನಾಟ್ರೆ ಡೇಮ್ ಪುನರ್‌ನಿರ್ಮಾಣಕ್ಕೆ ತಜ್ಞರ ನೆರವು: ಯುನೆಸ್ಕೊ

ಏಜೆನ್ಸೀಸ್
Published 18 ಏಪ್ರಿಲ್ 2019, 2:37 IST
Last Updated 18 ಏಪ್ರಿಲ್ 2019, 2:37 IST
ನಾಟ್ರೆ ಡೇಮ್‌ ಚರ್ಚ್‌ ಮೇಲ್ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬುಧವಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು –ಪಿಟಿಐ ಚಿತ್ರ
ನಾಟ್ರೆ ಡೇಮ್‌ ಚರ್ಚ್‌ ಮೇಲ್ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬುಧವಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು –ಪಿಟಿಐ ಚಿತ್ರ   

ವಿಶ್ವಸಂಸ್ಥೆ : ಅಗ್ನಿ ಆಕಸ್ಮಿಕದಿಂದ ಹಾನಿಗೊಳಗಾಗಿರುವ ಇತಿಹಾಸ ಪ್ರಸಿದ್ಧ ನಾಟ್ರೆ ಡೇಮ್ ಚರ್ಚ್‌ನ ಪುನರ್‌ ನಿರ್ಮಾಣಕ್ಕೆ ತಜ್ಞರ ನೆರವು ಒದಗಿಸುತ್ತಿರುವುದಾಗಿ ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರದ ನಿರ್ದೇಶಕಿ ಮೆಕ್‌ಟಿಲ್ಡ್ ರಾಸ್ಲರ್ ತಿಳಿಸಿದ್ದಾರೆ.

ಯುನೆಸ್ಕೊದ ತಜ್ಞರು ಈಗಾಗಲೇ ಸ್ಥಳದಲ್ಲಿದ್ದು, ಕಟ್ಟಡಕ್ಕೆ ಆಗಿರುವ ಹಾನಿ ಕುರಿತುಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಫ್ರಾನ್ಸ್‌ನ ಕೇಂದ್ರ ಬಿಂದು ಹಾಗೂ ಜಾಗತಿಕ ಸಂಕೇತವಾಗಿರುವಈ ಚರ್ಚ್ ಹಾನಿಗೀಡಾಗಿರುವುದು ವಿಶ್ವದೆಲ್ಲೆಡೆ ಜನರಿಗೆ ಆಘಾತ ತಂದಿದೆ. ಇದು ಕೇವಲ ಕ್ರೈಸ್ತ ಸಮುದಾಯಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರದ್ದು’ ಎಂದು ಅವರು ತಿಳಿಸಿದ್ದಾರೆ.

ಚರ್ಚ್‌ ಮೇಲ್ಭಾಗದಲ್ಲಿಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ಆಧಾರಕಂಬಗಳನ್ನು ಅಳವಡಿಸುವಲ್ಲಿ ನಿರತರಾಗಿದ್ದಾರೆ. ಬೃಹತ್ ಕ್ರೇನ್‌ಗಳ ಮೂಲಕ ಮರದ ಹಲಗೆಗಳನ್ನು ಸ್ಥಳಕ್ಕೆ ಸಾಗಿಸಲಾಗಿದೆ.

ಪತ್ತೆಯಾಗದ ಕಾರಣ:ಚರ್ಚ್‌ನ ಒಳಭಾಗ ಇನ್ನೂ ಅಪಾಯದಿಂದ ಮುಕ್ತವಾಗದ ಕಾರಣ, ತನಿಖಾಧಿಕಾರಿಗಳು ಒಳಪ್ರವೇಶಿಸಲು ಸಾಧ್ಯವಾಗಿಲ್ಲ. ಆದ್ದರಿಂದಅಗ್ನಿ ಆಕಸ್ಮಿಕಕ್ಕೆ ಕಾರಣ ಏನು ಎಂದು ಇನ್ನೂ ಪತ್ತೆಯಾಗಿಲ್ಲ. ಎಂದು ಪ್ಯಾರಿಸ್‌ನ ಕಾನೂನು ಇಲಾಖೆ ತಿಳಿಸಿದೆ.

ನವೀಕರಣ ಕಾರ್ಯದಲ್ಲಿ ನಿರತವಾಗಿರುವ ಕಂಪನಿಯ ಸಿಬ್ಬಂದಿ ಸೇರಿದಂತೆ 30 ಸಾಕ್ಷ್ಯಗಳ ಜತೆಗೆ ತನಿಖಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.

‘ಪುನರ್‌ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಸ್ಪರ್ಧೆ’

ಅಗ್ನಿ ಆಕಸ್ಮಿಕದಲ್ಲಿ ನಾಶವಾದಚರ್ಚ್‌ನ ಪಿರಮಿಡ್ ಆಕೃತಿಯ ಗೋಪುರ ಪುನರ್‌ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ವಿಶ್ವದೆಲ್ಲೆಡೆಯಿಂದ ವಾಸ್ತುಶಿಲ್ಪಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗುತ್ತಿದೆ.

‘ಈ ಕಾಲದ ಸವಾಲುಗಳನ್ನು ಎದುರಿಸಲು ಸಮರ್ಥವಾದ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಹೊಸ ಗೋಪುರ ನಿರ್ಮಿಸುವುದು ಈ ಸ್ಪರ್ಧೆಯ ಉದ್ದೇಶ’ ಎಂದು ಪ್ರಧಾನಿ ಎಡ್ವರ್ಡ್ ಫಿಲಿಪ್ ತಿಳಿಸಿದ್ದಾರೆ. ಪುನರ್‌ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರೊನ್ ಕರೆದಿದ್ದ ವಿಶೇಷ ಸಂಪುಟ ಸಭೆ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.

‘ಆರು ವರ್ಷ ಬಂದ್’: ‘ಅಗ್ನಿ ಅವಘಡದಿಂದ ಚರ್ಚ್‌ನ ಭಾಗ ದುರ್ಬಲವಾಗಿದೆ. ಆದ್ದರಿಂದ ಆರು ವರ್ಷ ಚರ್ಚ್ ಮುಚ್ಚಲಾಗುವುದು’ ಎಂದು ಬಿಷಪ್ ಪ್ಯಾಟ್ರಿಕ್ ಚುವೆಟ್ ತಿಳಿಸಿದ್ದಾರೆ.

ಧನ್ಯವಾದ ಅರ್ಪಣೆ: ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗೆ ಇಡೀ ಚರ್ಚ್ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.