ವಾಷಿಂಗ್ಟನ್: ‘ಭಾರತ ವಿಧಿಸುವ ಸುಂಕ ತಪ್ಪಿಸಿಕೊಳ್ಳಲು ಎಲಾನ್ ಮಸ್ಕ್ ಅವರು ಅಲ್ಲಿಯೇ ಟೆಸ್ಲಾ ವಿದ್ಯುತ್‌ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪಿಸಿದರೆ, ಅದು ಅಮೆರಿಕಕ್ಕೆ ಮಾಡುವ ಅನ್ಯಾಯವಾಗಲಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಖಾಸಗಿ ಸುದ್ದಿಸಂಸ್ಥೆ ಫಾಕ್ಸ್ ನ್ಯೂಸ್ ಜೊತೆಗಿನ ಸಂದರ್ಶನದ ವೇಳೆ ಮಾತನಾಡಿದ ಟ್ರಂಪ್, ‘ವಿಶ್ವದ ಪ್ರತಿಯೊಂದು ರಾಷ್ಟ್ರವೂ ನಮ್ಮಿಂದ ಪ್ರಯೋಜನ ಪಡೆಯುತ್ತಿದೆ. ಹಾಗಿದ್ದರೂ ನಮ್ಮ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲಾಗುತ್ತಿದೆ. ಭಾರತವೂ ಇದರಿಂದ ಹೊರತಲ್ಲ. ಅತಿಹೆಚ್ಚು ಸುಂಕ ವಿಧಿಸುವ ಆ ರಾಷ್ಟ್ರದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವೇ’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
‘ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಸುಂಕದ ಬಗ್ಗೆ ಚರ್ಚಿಸಿದ್ದೇನೆ. ನೀವು ನಮ್ಮ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿದ್ದೀರಿ. ಅದಕ್ಕೆ ಪ್ರತಿಯಾಗಿ ನಾವು ಸುಂಕ ವಿಧಿಸುತ್ತೇವೆ ಎಂಬ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
ಮುಂಬೈ ಮತ್ತು ನವದೆಹಲಿಯಲ್ಲಿ ಷೋರೂಂ ತೆರೆಯಲು ಸಿದ್ಧತೆ ನಡೆಸಿರುವ ಟೆಸ್ಲಾ, ವಿವಿಧ ಹುದ್ದೆಗಳ ಭರ್ತಿಗೆ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಜರ್ಮನಿಯ ತನ್ನ ಘಟಕದಿಂದ ಕಾರುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿದೆ. ಇದರಡಿ ಕನಿಷ್ಠ 500 ಮಿಲಿಯನ್ ಅಮೆರಿಕನ್ ಡಾಲರ್ (₹4,350 ಕೋಟಿ) ಹೂಡಿಕೆಯೊಂದಿಗೆ ದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಘೋಷಿಸಿದೆ.
ಟೆಸ್ಲಾ ವಿಶ್ವದ ಅತಿದೊಡ್ಡ ಇ.ವಿ ಕಾರು ತಯಾರಿಕಾ ಕಂಪನಿಯಾಗಿದೆ. 2022ರಿಂದಲೂ ದೇಶದ ಇ.ವಿ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿತ್ತು. ಕಳೆದ ವರ್ಷವೇ ದೇಶದಲ್ಲಿ ಶೋರೂಂ ಆರಂಭಿಸುವ ಸಂಬಂಧ ಸೂಕ್ತ ಸ್ಥಳದ ಹುಡುಕಾಟ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.