ADVERTISEMENT

UNO | ಪಾಕಿಸ್ತಾನ ತನ್ನ ಜನರ ಮೇಲೆಯೇ ಬಾಂಬ್‌ ಸ್ಫೋಟಿಸುವ ದೇಶ: ಪರ್ವತನೇನಿ ಹರೀಶ್

ಪಿಟಿಐ
Published 7 ಅಕ್ಟೋಬರ್ 2025, 13:06 IST
Last Updated 7 ಅಕ್ಟೋಬರ್ 2025, 13:06 IST
<div class="paragraphs"><p>ಪರ್ವತನೇನಿ ಹರೀಶ್</p></div>

ಪರ್ವತನೇನಿ ಹರೀಶ್

   

ವಿಶ್ವ ಸಂಸ್ಥೆ: ‘ಪಾಕಿಸ್ತಾನವು ತನ್ನ ಜನರ ಮೇಲೆಯೇ ಬಾಂಬ್‌ ಸ್ಫೋಟಿಸುತ್ತದೆ ಮತ್ತು ತನ್ನ ಜನರನ್ನೇ ವ್ಯವಸ್ಥಿತವಾಗಿ ನರಮೇಧ ಮಾಡುತ್ತದೆ’ ಎಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಸೋಮವಾರ ಬಲವಾದ ಪ್ರತ್ಯುತ್ತರವನ್ನು ನೀಡಿದೆ.

‘ಮಹಿಳೆ, ಶಾಂತಿ ಮತ್ತು ಭದ್ರತೆ’ ವಿಷಯದ ಕುರಿತ ಚರ್ಚೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದೆ. ಈ ಚರ್ಚೆಯ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿತ್ತು. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಚರ್ಚೆಯಲ್ಲಿ ಮಾತನಾಡಿದರು.

ADVERTISEMENT

ಇದೇ ವಿಷಯದ ಕುರಿತು ವಿಷಯ ಮಂಡಿಸಿದ್ದ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿತ್ತು. ‘ಮಹಿಳೆ, ಶಾಂತಿ ಮತ್ತು ಭದ್ರತೆ ವಿಷಯದ ಕಾರ್ಯಸೂಚಿಯಲ್ಲಿ ಕಾಶ್ಮೀರಿ ಮಹಿಳೆಯರನ್ನು ಭಾರತವು ಹೊರಗಿಟ್ಟಿದೆ. ಈ ನಡೆಯು ಆ ದೇಶದ ನ್ಯಾಯಪರತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ತೋರಿಸುತ್ತದೆ’ ಎಂದಿತ್ತು.

‘ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) 1971ರ ಮಾರ್ಚ್‌ 25ರಂದು ಪಾಕಿಸ್ತಾನದ ಸೇನೆಯು ಕ್ರೂರವಾದ ದಾಳಿ ನಡೆಸಿತ್ತು. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೊಲ್ಲಲಾಗಿತ್ತು. ಇದಕ್ಕೆ ‘ಆಪರೇಷನ್‌ ಸರ್ಚ್‌ಲೈಟ್‌’ ಎಂದು ಹೆಸರಿಡಲಾಗಿತ್ತು. ಈ ಆಪರೇಷನ್‌ ಮೂಲಕ ತನ್ನದೇ ಸೇನೆಯಿಂದ 4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಸಿದ ದೇಶವೊಂದು ತಪ್ಪು ಮಾಹಿತಿಗಳಿಂದ, ತನ್ನ ಅತಿಶಯೋಕ್ತಿಯ ಮಾತುಗಳಿಂದ ಜಗತ್ತನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ಭಾರತ ಹೇಳಿತು.

ಭಾರತದ ಭೂಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ತನ್ನದು ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನವು ಆ ಪ್ರದೇಶದ ವಿರುದ್ಧ ಉನ್ಮತ್ತವಾದ ಪುಂಖಾನುಪುಂಖ ಮಾತುಗಳನ್ನು ಆಡುತ್ತಿರುವುದು ನಮ್ಮ ದುರಾದೃಷ್ಟ
ಪರ್ವತನೇನಿ ಹರೀಶ್ ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.