ಇಂಡೊನೇಷ್ಯಾದ ಪಶ್ಚಿಮ ನುಸಾ ತೆಂಗರಾ ಪ್ರಾಂತ್ಯದ ಆಡಳಿತ ಕಚೇರಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದರು
ಜಕಾರ್ತ: ಸಂಸತ್ ಸದಸ್ಯರ ವೇತನ ಮತ್ತು ಇತರ ಭತ್ಯೆಗಳ ಹೆಚ್ಚಳ ಸೇರಿದಂತೆ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಇಂಡೊನೇಷ್ಯಾದಲ್ಲಿ ಜನರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಕಾರರು ಶನಿವಾರ ಮೂರು ಪ್ರಾಂತ್ಯಗಳಲ್ಲಿ ಸ್ಥಳೀಯ ಆಡಳಿತ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಪಶ್ಚಿಮ ನುಸಾ ತೆಂಗರಾ, ಕೇಂದ್ರ ಜಾವಾದ ಪೆಕಲೊಂಗನ್ ಸಿಟಿ ಮತ್ತು ಪಶ್ಚಿಮ ಜಾವಾದ ಸಿರೆಬೊನ್ ಸಿಟಿಯಲ್ಲಿನ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಂಡೊನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರಿಗೆ ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿರುವ ಹಿಂಸಾಚಾರದಲ್ಲಿ ಇದುವರೆಗೆ ಮೂವರು ಮೃತಪಟ್ಟಿದ್ದಾರೆ.
ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಜನರು ಜಕಾರ್ತದಲ್ಲಿ ಸೋಮವಾರ ಭಾರಿ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆ ದೇಶದ ಇತರ ಭಾಗಗಳಿಗೂ ಹಬ್ಬಿದೆ. ಶುಕ್ರವಾರ ಜಕಾರ್ತದಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ವಾಹನ ಡಿಕ್ಕಿಯಾಗಿ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮೃತಪಟ್ಟಿದ್ದ. ಈ ಘಟನೆ ಬಳಿಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ದಕ್ಷಿಣ ಸುಲವೆಸಿ ಪ್ರಾಂತ್ಯದ ರಾಜಧಾನಿ ಮಕಸ್ಸರ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.