ADVERTISEMENT

ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆಗೆ ವಿರೋಧ: ಲಾಸ್‌ ಏಂಜಲೀಸ್‌ನಲ್ಲಿ ಪ್ರತಿಭಟನೆ

ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆ; 44 ಮಂದಿ ಬಂಧನ

ರಾಯಿಟರ್ಸ್
Published 8 ಜೂನ್ 2025, 14:13 IST
Last Updated 8 ಜೂನ್ 2025, 14:13 IST
ಲಾಸ್‌ ಏಂಜಲೀಸ್‌ನಲ್ಲಿ ಭದ್ರತಾ ಸಿಬ್ಬಂದಿ ಪ್ರತಿಭಟನಕಾರರ ವಿರುದ್ಧ ಅಶ್ರುವಾಯು ಶೆಲ್‌ ಪ್ರಯೋಗಿಸಿದರು –ಎಪಿ ಚಿತ್ರ
ಲಾಸ್‌ ಏಂಜಲೀಸ್‌ನಲ್ಲಿ ಭದ್ರತಾ ಸಿಬ್ಬಂದಿ ಪ್ರತಿಭಟನಕಾರರ ವಿರುದ್ಧ ಅಶ್ರುವಾಯು ಶೆಲ್‌ ಪ್ರಯೋಗಿಸಿದರು –ಎಪಿ ಚಿತ್ರ   

ಲಾಸ್‌ ಏಂಜಲೀಸ್: ವಲಸೆ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ವಿರೋಧಿಸಿ ಲಾಸ್‌ ಏಂಜಲೀಸ್‌ನಲ್ಲಿ ಸತತ ಎರಡನೇ ದಿನವಾದ ಶನಿವಾರವೂ ಪ್ರತಿಭಟನೆ ನಡೆಯಿತು.

ಕಾನೂನು ಸುವ್ಯವಸ್ಥೆ ಕಾಪಾಡಲು ನ್ಯಾಷನಲ್ ಗಾರ್ಡ್ಸ್‌ನ 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಆಡಳಿತ ತಿಳಿಸಿದೆ. ಲಾಸ್ ಏಂಜಲೀಸ್‌ನಲ್ಲಿ ಹಿಂಸಾಚಾರ ಮುಂದುವರಿದರೆ ಸೇನೆಯನ್ನು ನಿಯೋಜಿಸಲು ಪೆಂಟಗನ್ ಸಿದ್ಧವಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಚ್ಚರಿಸಿದ್ದಾರೆ.

ಲಾಸ್ ಏಂಜಲೀಸ್‌ನ ಆಗ್ನೇಯ ಭಾಗದಲ್ಲಿ ಪ್ರತಿಭಟನಕಾರರು ಶನಿವಾರ ಭದ್ರತಾ ಸಿಬ್ಬಂದಿ ಜತೆ ಘರ್ಷಣೆಗೆ ಇಳಿದಿದ್ದಾರೆ. ಕೆಲವು ಪ್ರತಿಭಟನಕಾರರು ಮೆಕ್ಸಿಕೊ ದೇಶದ ಧ್ವಜ ಪ್ರದರ್ಶಿಸಿದ್ದಾರೆ. ಶನಿವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ADVERTISEMENT

ವಲಸೆ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಲಾಸ್‌ ಏಂಜಲೀಸ್‌ ನಗರದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ವಲಸೆ ನೀತಿ ಉಲ್ಲಂಘಿಸಿದ ಆರೋಪದಲ್ಲಿ ಶುಕ್ರವಾರ 44 ಮಂದಿಯನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನೆ ಆರಂಭವಾಗಿದೆ.

‘ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಕ್ಕೂ ಅಧಿಕ ಮಂದಿ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳ ಜತೆ ಘರ್ಷಣೆಗೆ ಇಳಿದಿದ್ದರು’ ಎಂದು ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ.

ಆದರೆ ನ್ಯಾಷನಲ್‌ ಗಾರ್ಡ್ಸ್‌ನ ಸಿಬ್ಬಂದಿಯನ್ನು ನಿಯೋಜಿಸುವ ಟ್ರಂಪ್‌ ಅವರ ನಿರ್ಧಾರವನ್ನು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಟೀಕಿಸಿದ್ದಾರೆ. ‘ಉದ್ದೇಶಪೂರ್ವಕವಾಗಿ ಪ್ರಚೋದನೆ ಉಂಟುಮಾಡುವ ಕ್ರಮ’ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ನಮ್ಮಲ್ಲಿ ಭದ್ರತಾ ಸಿಬ್ಬಂದಿಯ ಕೊರತೆಯಿಲ್ಲ. ಅವರು (ಟ್ರಂಪ್) ಪ್ರಚಾರವನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.

ಕಾಶ್‌ ಪಟೇಲ್‌ ಎಚ್ಚರಿಕೆ: ಪ್ರತಿಭಟನೆ ಹೆಸರಿನಲ್ಲಿ ಪೊಲೀಸರ ಜತೆ ಸಂಘರ್ಷಕ್ಕೆ ಇಳಿಯುವವರನ್ನು ಜೈಲಿಗೆ ಅಟ್ಟಲಾಗುವುದು ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ನಿರ್ದೇಶಕರಾದ ಕಾಶ್‌ ಪಟೇಲ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.