ADVERTISEMENT

ಭಾರತದ ಸರಕುಗಳ ಆಮದಿನ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ ಟ್ರಂಪ್

ಪಿಟಿಐ
Published 6 ಆಗಸ್ಟ್ 2025, 21:11 IST
Last Updated 6 ಆಗಸ್ಟ್ 2025, 21:11 IST
   

ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಬೆನ್ನಲ್ಲೇ, ಅಮೆರಿಕ ಭಾರತದಿಂದ ಆಮದು ಮಾಡಿ ಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕ ಹೇರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಸಹಿ ಹಾಕಿದ್ದಾರೆ. 

ವಿನಾಯಿತಿ ಪಟ್ಟಿಯಲ್ಲಿರುವ ಕೆಲ ಸರಕುಗಳನ್ನು ಹೊರತುಪಡಿಸಿದಂತೆ, ಭಾರತದ ಮೇಲೆ ಹೇರಲಾದ ಸುಂಕದ ಪ್ರಮಾಣ ಶೇ 50ಕ್ಕೆ ಏರಿದಂತಾಗಿದೆ. ಟ್ರಂಪ್‌ ಅವರ ಈ ನಡೆಯು, ಜವಳಿ, ಸಾಗರ ಹಾಗೂ ಚರ್ಮ ಉತ್ಪನ್ನ ಗಳ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತದಿಂದ ಅಮೆರಿಕಕ್ಕೆ ₹7.5 ಲಕ್ಷ ಕೋಟಿ (86 ಶತ ಕೋಟಿ ಡಾಲರ್) ಮೌಲ್ಯದಷ್ಟು ಸರಕುಗಳ ರಫ್ತು ಆಗುತ್ತದೆ. ಹೆಚ್ಚುವರಿ ಸುಂಕ ಈ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು, ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ರಷ್ಯಾಕ್ಕೆ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಟ್ರಂಪ್‌ ದೂರಿದ್ದಾರೆ. 

ಈ ಹಿಂದೆ ಭಾರತದಿಂದ ಆಮದುಮಾಡಿಕೊಳ್ಳಲಾಗುವ ಸರಕುಗಳ ಮೇಲೆ ಹೇರಿದ್ದ ಶೇ 25ರಷ್ಟು ಸುಂಕವು ಆ.7ರಿಂದ ಜಾರಿಗೆ ಬರಲಿದೆ. ಇದು ಜಾರಿಯಾಗಲು ಇನ್ನೂ 14 ಗಂಟೆ ಬಾಕಿ ಇರುವಾಗಲೇ, ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ಹೇರಲಾಗಿದೆ.  

ಹೆಚ್ಚುವರಿ ಸುಂಕವು 21 ದಿನಗಳಲ್ಲಿ ಅಥವಾ ಆಗಸ್ಟ್‌ 27ರಿಂದ ಜಾರಿಗೆ ಬರಲಿದೆ. ಇದು ಉಕ್ಕು, ಅಲ್ಯುಮಿನಿಯಂ ಸರಕುಗಳಿಗೆ ಅನ್ವಯಿಸುವುದಿಲ್ಲ.
ಔಷಧ ವಲಯ ಹೆಚ್ಚುವರಿ ಸುಂಕ ನೀತಿಯಡಿ ಬರಲಿದೆ.

ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಅಮೆರಿಕದ ನಿಲುವು ‘ನ್ಯಾಯಸಮ್ಮತವಲ್ಲ’ ಎಂದು ಭಾರತ ಮಂಗಳವಾರ ತಿರುಗೇಟು
ನೀಡಿತ್ತು. 

ಭಾರತ ತನ್ನ ಬೇಡಿಕೆಯ ಪೈಕಿ ಶೇ 88ರಷ್ಟು ಕಚ್ಚಾ ತೈಲವನ್ನು ವಿವಿಧ ರಾಷ್ಟ್ರಗಳಿಂದ ಖರೀದಿಸುತ್ತದೆ. 2021ರ ವರೆಗೆ ರಷ್ಯಾದಿಂದ ಖರೀದಿಸಿದ ತೈಲ ಪ್ರಮಾಣ ಶೇ 0.2ರಷ್ಟಾಗುತ್ತದೆ. ಉಕ್ರೇನ್‌ ಮೇಲೆ ಯುದ್ಧ ಸಾರಿದ ನಂತರ, ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಆರಂಭಿಸಿದೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು ಈ ಅವಕಾಶವನ್ನು ತಡಮಾಡದೇ ಬಳಸಿಕೊಂಡಿವೆ. ಪ್ರಸ್ತುತ ರಷ್ಯಾ, ಭಾರತಕ್ಕೆ ತೈಲ ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ.

ಅನ್ಯಾಯ, ಅಸಮರ್ಥನೀಯ: ಭಾರತ

ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಿರುವುದು ‘ಅನ್ಯಾಯ, ಅಸಮರ್ಥನೀಯ ಮತ್ತು ಅತಾರ್ಕಿಕ’ ಎಂದು ಭಾರತ ‍ಪ್ರತಿಕ್ರಿಯೆ ನೀಡಿದೆ. 

ರಾಷ್ಟ್ರೀಯ ಹಿತಾಸಕ್ತಿಯನ್ನು ಸಂರಕ್ಷಿಸಲು ಬೇಕಾದ ಎಲ್ಲ ಕ್ರಮಗಳನ್ನೂ ಭಾರತ ಕೈಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

‘ರಷ್ಯಾದಿಂದ ತೈಲ ಖರೀದಿ ಮಾಡದಂತೆ ಅಮೆರಿಕ ಒತ್ತಡ ಹೇರುತ್ತಿದೆ. ಇದಕ್ಕಾಗಿ ಹೆಚ್ಚುವರಿ ಸುಂಕ ವಿಧಿಸಲು ನಿರ್ಧರಿಸಿದ್ದು ದುರದೃಷ್ಟಕರ’ ಎಂದು ಭಾರತ ಹೇಳಿದೆ. ‘ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅಮೆರಿಕವು ಭಾರತವನ್ನು ಗುರಿ ಮಾಡುತ್ತಿದೆ. ಈಗ ಹೆಚ್ಚುವರಿ ಸುಂಕ ವಿಧಿಸಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ನಾವು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಆಮದು ಮಾರುಕಟ್ಟೆ ಅಂಶಗಳ ಮೇಲೆ ಆಧಾರಿತ. ಭಾರತದ ಇಂಧನ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಸಚಿವಾಲಯ ಹೇಳಿದೆ. 

‘ಹಲವು ದೇಶಗಳು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಹಾಗಾಗಿ, ಭಾರತದ ವಿರುದ್ಧ ಅಮೆರಿಕದ ಕ್ರಮವು ಅತ್ಯಂತ ದುರದೃಷ್ಟಕರ’ ಎಂದು ಹೇಳಲಾಗಿದೆ. 


ರಷ್ಯಾದಿಂದ ರಸಗೊಬ್ಬರ, ರಾಸಾಯನಿಕಗಳ ಆಮದು ಗೊತ್ತಿಲ್ಲ: ಟ್ರಂಪ್

‘ರಷ್ಯಾದಿಂದ ಅಮೆರಿಕವು ಯುರೇನಿಯಂ, ರಸಗೊಬ್ಬರಗಳು ಹಾಗೂ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಈ ಸರಕುಗಳನ್ನು ಅಮೆರಿಕವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ’ ಎಂಬ ಭಾರತದ ಹೇಳಿಕೆಗೆ ಟ್ರಂಪ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ, ನಿಮಗೆ ಮಾಹಿತಿ ನೀಡುತ್ತೇನೆ’ ಎಂದು ಟ್ರಂಪ್‌ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಷ್ಯಾದಿಂದ ಇಂಧನ ಖರೀದಿ ಮಾಡುತ್ತಿರುವ ಇತರ ದೇಶಗಳ ಮೇಲೆ ಸುಂಕ ವಿಧಿಸುವ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.