ADVERTISEMENT

ಸೇನಾ ಸಂಘರ್ಷ ಆಗದಂತೆ ಪ್ರತಿಕ್ರಿಯಿಸಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌

‘ಉಗ್ರರ ನಿಗ್ರಹಕ್ಕೆ ಪಾಕಿಸ್ತಾನ ಸಹಕರಿಸಲಿ’ ಎಂದು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:31 IST
Last Updated 2 ಮೇ 2025, 15:31 IST
ಜೆ.ಡಿ.ವ್ಯಾನ್ಸ್
ಜೆ.ಡಿ.ವ್ಯಾನ್ಸ್   

ನವದೆಹಲಿ: ‘ಪಹಲ್ಗಾಮ್‌ನ ಉಗ್ರರ ದಾಳಿ ಕೃತ್ಯಕ್ಕೆ ಪ್ರತಿಕ್ರಿಯಿಸುವಾಗ ಪಾಕ್‌ ಜೊತೆಗೆ ಸೇನಾ ಸಂಘರ್ಷ ಏರ್ಪಡುವುದನ್ನು ತಪ್ಪಿಸಬೇಕು’ ಎಂದೂ ಅಮೆರಿಕ ಭಾರತಕ್ಕೆ ಕೋರಿದೆ.

‘ಸ್ನೇಹಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ನಾವು ನಿಕಟ ಸಂಪರ್ಕದಲ್ಲಿ ಇದ್ದೇವೆ. ಪ್ರಾದೇಶಿಕ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳದಂತೆ ಭಾರತ ಪ್ರತಿಕ್ರಿಯಿಸಲಿದೆ ಎಂದು ಆಶಿಸುತ್ತೇವೆ’ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಹೇಳಿದ್ದಾರೆ.

‘ಫಾಕ್ಸ್‌ ನ್ಯೂಸ್‌’ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ನಿಲುವು ತಿಳಿಸಿರುವ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರು, ‘ಗಡಿಯಾಚೆಗಿನ ಉಗ್ರರನ್ನು ಹತ್ತಿಕ್ಕುವ ಭಾರತದ ನಡೆಗೆ ಪಾಕಿಸ್ತಾನವು ‘ಸಹಕರಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ವ್ಯಾನ್ಸ್ ಅವರು ಇತ್ತೀಚೆಗೆ ಭಾರತದ ಪ್ರವಾಸದಲ್ಲಿದ್ದಾಗಲೇ ಉಗ್ರರು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, 26 ಜನರು ಮೃತಪಟ್ಟಿದ್ದರು. 

ಭಾರತ ಮತ್ತು ಪಾಕ್‌ ನಡುವಿನ ಉದ್ವಿಗ್ನ ಸ್ಥಿತಿ ಮೂಡುತ್ತಿರುವುದು ಕಳವಳಕಾರಿಯೇ ಎಂಬ ಪ್ರಶ್ನೆಗೆ, ‘ಪರಿಸ್ಥಿತಿ ಉಲ್ಬಣಗೊಳ್ಳುವ ಆತಂಕವಿದೆ. ಉಭಯ ರಾಷ್ಟ್ರಗಳು ಅಣುಶಕ್ತಿ ಹೊಂದಿರುವುದು ಇದಕ್ಕೆ ಕಾರಣವಾಗಿದೆ’ ಎಂದು ವ್ಯಾನ್ಸ್ ಪ್ರತಿಕ್ರಿಯಿಸಿದರು. 

‘ಉಭಯ ದೇಶಗಳ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ. ಬಿಕ್ಕಟ್ಟು ಉಲ್ಬಣಿಸದಂತೆ ಭಾರತ ಪ್ರತಿಕ್ರಿಯಿಸದು ಎಂಬ ವಿಶ್ವಾಸವಿದೆ. ನೋಡೋಣ ಏನಾಗುವುದೋ’ ಎಂದು ಹೇಳಿದರು.  

‘ಆದರೆ, ಸದ್ಯ ತನ್ನ ನೆಲವನ್ನು ನೆಲೆಯಾಗಿಸಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಉಗ್ರರ ಹತ್ತಿಕ್ಕಲು ಸಹಕರಿಸುವ ಹೊಣೆಗಾರಿಕೆಯನ್ನು ಪಾಕಿಸ್ತಾನ ತೋರಬೇಕಿದೆ’ ಎಂದರು.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ಅವರು, ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಭಾರತ ಮತ್ತು ಪಾಕ್‌ ಸಹಕರಿಸಬೇಕು ಎಂದು ಗುರುವಾರ ಹೇಳಿದ್ದರು. ಅದರ ಹಿಂದೆಯೇ ವ್ಯಾನ್ಸ್‌ ಈ ಮಾತು ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನವು ಸಂಯಮ ತೋರಬೇಕು’ ಎಂದು ಚೀನಾ ಈ ವಾರದ  ಆರಂಭದಲ್ಲಿ ಹೇಳಿದ್ದರೆ, ಪರಿಸ್ಥಿತಿ ಶಮನಗೊಳಿಸಲು ಜವಾಬ್ದಾರಿಯುತ ನಿರ್ಣಯಕ್ಕೆ ಬರುವಂತೆ ಅಮೆರಿಕವು ಸಲಹೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.