ADVERTISEMENT

ಇರಾನ್ ಪರಮಾಣು ನಾಶಕ್ಕೆ ಅಮೆರಿಕದಿಂದ ಸಾಧ್ಯವಾಗಿಲ್ಲವೇ?: ಚೀನಾ ತಜ್ಞರು ಹೇಳೋದೇನು?

ಪಿಟಿಐ
Published 22 ಜೂನ್ 2025, 11:26 IST
Last Updated 22 ಜೂನ್ 2025, 11:26 IST
<div class="paragraphs"><p>ಅಮೆರಿಕ– ಚೀನಾ ವ್ಯಾಪಾರ ಯುದ್ಧ</p></div>

ಅಮೆರಿಕ– ಚೀನಾ ವ್ಯಾಪಾರ ಯುದ್ಧ

   

– ರಾಯಿಟರ್ಸ್ ಚಿತ್ರ

ಬೀಜಿಂಗ್: ಇರಾನ್‌ನ ಪರಮಾಣು ತಾಣಗಳ ಮೇಲೆ ಅಮೆರಿಕದ ಬಾಂಬ್ ದಾಳಿಯನ್ನು ಖಂಡಿಸಿರುವ ಚೀನಾದ ಅಧಿಕೃತ ಮಾಧ್ಯಮವು, ದಾಳಿಗೆ ಬಳಸಿರುವ ಬಂಕರ್ ಬಸ್ಟರ್ ಬಾಂಬ್‌ಗಳು ಇರಾನ್‌ನ ಪರಮಾಣು ಸಂಗ್ರಹವನ್ನು ನಾಶ ಮಾಡಲು ಸಾಕಾಗಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿ ಹೇಳಿದೆ.

ADVERTISEMENT

ಭಾನುವಾರ ಬೆಳಗಿನ ಜಾವ ಅಮೆರಿಕವು ಇರಾನ್‌ನ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ್ದು, ಇರಾನ್‌ನ ಪರಮಾಣು ಯೋಜನೆಯನ್ನು ನಾಶಮಾಡಿರುವುದಾಗಿ ಹೇಳಿದೆ. ಮೂರು ಪರಮಾಣು ತಾಣಗಳ ಮೇಲೆ ಅತ್ಯಂತ ಯಶಸ್ವಿ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಇರಾನ್‌ನ ಪರಮಾಣು ತಾಣಗಳ ಮೇಲಿನ ದಾಳಿಯಲ್ಲಿ ಶಕ್ತಿಶಾಲಿ ಬಿ2 ಬಾಂಬರ್‌ಗಳನ್ನು ಬಳಸಲಾಗಿದೆ.

ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮಕ್ಕೆ ಶನಿವಾರ ಕರೆ ನೀಡಿದ್ದ ಚೀನಾ, ಅಮೆರಿಕದ ವೈಮಾನಿಕ ದಾಳಿಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲವಾದರೂ, ಸರ್ಕಾರಿ ಸ್ವಾಮ್ಯದ ಚೀನಾ ಡೈಲಿಯಲ್ಲಿನ ಸಂಪಾದಕೀಯದಲ್ಲಿ, ಇರಾನ್ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ಏಕಪಕ್ಷೀಯ ಮಿಲಿಟರಿ ದಾಳಿಗಳು ಅಜಾಗರೂಕ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಟೀಕಿಸಲಾಗಿದೆ.

ಇಂತಹ ಏಕಪಕ್ಷೀಯ ದಾಳಿಗಳು ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಅಪಾಯಕಾರಿ ದಾಳಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ. ಈ ದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುತ್ತವೆ ಎಂದೂ ಅದು ಹೇಳಿದೆ.

ಈ ಮಧ್ಯೆ, ಅಮೆರಿಕದ ಕಾರ್ಯಾಚರಣೆಯ ನಿಜವಾದ ಪರಿಣಾಮ ಏನಾಗಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇರಾನ್ ಪರಮಾಣು ತಾಣಗಳ ಸಂಪೂರ್ಣ ನಾಶಕ್ಕೆ ಅಮೆರಿಕದ ಬಾಂಬ್‌ಗಳು ಸಾಕಾಗಿಲ್ಲದೇ ಇರಬಹುದು ಎಂದು ಚೀನಾ ತಜ್ಞರು ಹೇಳಿದ್ದಾರೆ.

ಫೋರ್ಡೊ ಪರಮಣು ಕೇಂದ್ರವು 100 ಮೀಟರ್ ಆಳದ ನೆಳಮಾಳಿಗೆಯಲ್ಲಿದೆ. ಅದನ್ನು ಒಂದು ಅಥವಾ ಎರಡು ದಾಳಿಗಳಿಂದ ಸಂಪೂರ್ಣ ನಾಶ ಮಾಡುವುದು ಅತ್ಯಂತ ಕಠಿಣ. ಬಂಕರ್ ಬಸ್ಟರ್ ಬಾಂಬ್‌ಗಳಿಂದಲೂ ಅದು ಸಾಧ್ಯವಿಲ್ಲ ಎಂದು ಚೀನಾದ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರದ ಸಹಾಯಕ ಸಂಶೋಧಕ ಲೀ ಜಿಕ್ಸಿನ್ ಹೇಳಿದ್ದಾರೆ.

ಚೀನಾದ ಮಿಲಿಟರಿ ವ್ಯವಹಾರಗಳ ತಜ್ಞ ಝಾಂಗ್ ಜುನ್ಸೆ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಭೂಗತ ಪರಮಾಣು ಸೌಲಭ್ಯಗಳನ್ನು ನಾಶಮಾಡಲು ಅಮೆರಿಕದ ಮೊದಲ ದಾಳಿಗಳಿಂದ ಸಾಧ್ಯವಾಗದೇ ಇದ್ದಿರಬಹುದು ಎಂದು ಅವರು ಹೇಳಿದ್ದಾರೆ.

ಉದಾಹರಣೆಗೆ, ಫೋರ್ಡೊ ಪರಮಾಣು ತಾಣವು ಹೆಬ್ಬಂಡೆಯ ಕೆಳಗೆ 90 ಮೀಟರ್ ಆಳದಲ್ಲಿದೆ. ಇದನ್ನು ನಾಶ ಮಾಡುವುದು ಬಹಳ ಕಷ್ಟ. ಇಸ್ರೇಲ್ ಇದನ್ನು ಪ್ರಮುಖ ಗುರಿಯಾಗಿ ನೋಡುತ್ತದೆಯಾದರೂ, ಅದನ್ನು ಪರಿಣಾಮಕಾರಿಯಾಗಿ ನಾಶ ಮಾಡಲು ಬೇಕಾದ ಶಸ್ತ್ರಾಸ್ತ್ರ ಅದರ ಬಳಿ ಇಲ್ಲ ಎಂದಿದ್ದಾರೆ.

ಈ ದಾಳಿಗೆ 30,000-ಪೌಂಡ್ ಜಿಬಿಯು-57 ಬಂಕರ್ ಬಸ್ಟರ್‌ಗಳಿಂದ ಶಸ್ತ್ರಸಜ್ಜಿತವಾದ ಬಿ-2 ಬಾಂಬರ್‌ಗಳನ್ನು ಅಮೆರಿಕ ಬಳಸಿದೆ. ಆದರೆ, ಇವು ಭೂಗರ್ಭದೊಳಗೆ ಸುಮಾರು 65 ಮೀಟರ್‌ಗಳವರೆಗೆ ಮಾತ್ರ ಗುರಿ ಭೇದಿಸಬಲ್ಲವು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.